ನವದೆಹಲಿ: ಅಗ್ನಿಪಥ್‌ನ ಹೊಸ ನೇಮಕಾತಿ ಯೋಜನೆಯಡಿ ಭಾರತೀಯ ಸೇನೆ ಮತ್ತು ವಾಯುಪಡೆಗೆ ಆಯ್ಕೆಯಾಗಿರುವ ಯುವಕರು ತಮ್ಮ ತಮ್ಮ ತರಬೇತಿ ಕೇಂದ್ರಗಳನ್ನು ತಲುಪಿದ್ದು, ಭಾರತೀಯ ವಾಯುಸೇನೆ ಸೇರುವವರಿಗೆ ಭಾನುವಾರದಿಂದಲೇ ತರಬೇತಿ ಆರಂಭವಾಗಿದೆ.
ಏರ್‌ಮೆನ್ ಟ್ರೈನಿಂಗ್ ಸ್ಕೂಲ್(ಎಟಿಎಸ್) ಬೆಳಗಾವಿಯಲ್ಲಿ "ಅಗ್ನಿವೀರ್ ವಾಯು'ನ ಮೊದಲ ಬ್ಯಾಚ್‌ನ ತರಬೇತಿ ಇಂದಿನಿಂದ ಪ್ರಾರಂಭವಾಗಿದೆ ಎಂದು ವಾಯುಪಡೆ ಮಾಹಿತಿ ನೀಡಿದೆ.
ತರಬೇತಿ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಏರ್ ಮಾರ್ಷಲ್ ಮನವೇಂದ್ರ ಸಿಂಗ್ ಶಾಲೆಗೆ ಭೇಟಿ ನೀಡಿ ಹೊಸದಾಗಿ ನೇಮಕಗೊಂಡ ಬ್ಯಾಚ್ ಅನ್ನು ಉದ್ದೇಶಿಸಿ ಮಾತನಾಡಿದರು.
ಅಲ್ಲದೆ, ತರಬೇತಿ ಮುಗಿದ ನಂತರ ಸೈನಿಕರಾಗಿ ಸೇನೆಗೆ ಸೇರಲು ದೇಶಾದ್ಯಂತ ಅಗ್ನಿಪಥ್ ಯೋಜನೆ ಅಡಿ ನೇಮಕಗೊಂಡ ಯುವಕರು ವಿವಿಧ ತರಬೇತಿ ಕೇಂದ್ರಗಳಿಗೆ ವರದಿ ಮಾಡಿಕೊಂಡಿದ್ದಾರೆ. ಇಂದಿನಿಂದ ತರಬೇತಿ ನೀಡುವುದಾಗಿ ಸೇನಾ ಮುಖ್ಯಸ್ಥ ಜನರಲ್ ಎಂಕೆ ಪಾಂಡೆ ಕಳೆದ ವಾರ ತಿಳಿಸಿದ್ದರು.
ಭಾರತೀಯ ನೌಕಾಪಡೆಯು ಮಹಿಳೆಯರಿಗೂ ತರಬೇತಿಗೆ ಅವಕಾಶ ನೀಡಿದ್ದು, ಒಡಿಶಾದ ಐಎನ್ಎಸ್ ಚಿಲ್ಕಾದಲ್ಲಿರುವ ನಾವಿಕ ತರಬೇತಿ ಸಂಸ್ಥೆಯಲ್ಲಿ 3,000 ಅಗ್ನಿವೀರ್‌ಗಳು ನವೆಂಬರ್‌ನಲ್ಲಿ ತರಬೇತಿ ಪಡೆದಿದ್ದು, ಅದರಲ್ಲಿ 341 ಮಹಿಳೆಯರು ಸೇರಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಮೂರು ವರ್ಷಗಳಿಂದ ಯಾವುದೇ ಸೇನಾ ನೇಮಕಾತಿ ನಡೆಯದ ಕಾರಣ ಈ ನೇಮಕಾತಿಯ ಆರಂಭವು ಸಶಸ್ತ್ರ ಪಡೆಗಳಿಗೆ ಮಹತ್ವದ್ದಾಗಿದೆ.