ಕಾಸರಗೋಡು : ಮಂಜೇಶ್ವರ ಉಪ್ಪಳ ಗೇಟ್ ಸನಿಹ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿರುವ ಜಾರ್ಖಂಡ್ ಮಹಿಳೆಗೆ 108 ಆಂಬುಲೆನ್ಸ್ ಚಾಲಕ ಮತ್ತು ಆರೋಗ್ಯ ಸಹಾಯಕ ಹೆರಿಗೆ ಮಾಡಿಸಿ ಮಗು ಮತ್ತು ಬಾಣಂತಿಯನ್ನು ರಕ್ಷಿಸಿದ್ದಾರೆ.
ಉಪ್ಪಳ ಗೇಟ್ ಬಳಿ ವಾಸವಾಗಿರುವ ಜಾಖರ್ಂಡ್ ಮೂಲದ ರಿಜ್ವಾನ್ ಅವರ ಪತ್ನಿ ನಾಜಿಯಾ (26) ಅವರಿಗೆ ಸೋಮವಾರ ರಾತ್ರಿ ಹೆರಿಗೆ ನೋವುಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪತಿ ರಿಜ್ವಾನ್ 108 ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ತಕ್ಷಣ ಕಂಟ್ರೋಲ್ ರೂಂನಿಂದ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತುರ್ತು ಸಂದೇಶ ರವಾನೆಯಾಗಿದ್ದು, ಆಂಬ್ಯುಲೆನ್ಸ್ ಪೈಲಟ್ ಹರ್ಷಿತ್ ಕುಮಾರ್ ಮತ್ತು ತುರ್ತು ವೈದ್ಯಕೀಯ ತಂತ್ರಜ್ಞ ಅನುರೂಪ್ ಎಂಎಸ್ ಸ್ಥಳಕ್ಕೆ ಧಾವಿಸಿದ್ದಾರೆ. ತಪಾಸಣೆ ನಡೆಸಿ, ಹೆರಿಗೆಯಾಗದೆ ನಾಜಿಯಾಳನ್ನು ಆಂಬ್ಯುಲೆನ್ಸ್ನಲಿ ಸಾಗಿಸುವುದು ಸುರಕ್ಷಿತವಲ್ಲ ಎಂದು ತಂತ್ರಜ್ಞರು ಮನಗಂಡು, ಮನೆಯಲ್ಲಿ ಅಗತ್ಯ ಸಲಕರಣಗಳನ್ನು ಸಿದ್ಧಪಡಿಸಿದ್ದು, ಅನುರೂಪ್ ಅವರ ಮೇಲ್ವಿಚಾರಣೆಯಲ್ಲಿ ನಾಜಿಯಾ ರಾತ್ರಿ 9 ಗಂಟೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಬಾಣಂತಿ ಮತ್ತು ಮಗುವಿಗೆ ಅಗತ್ಯ ಪ್ರಥಮ ಚಿಕಿತ್ಸೆ ನೀಡಿ ಆಂಬ್ಯುಲೆನ್ಸ್ ಮೂಲಕ ಇಬ್ಬರನ್ನೂ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜಾರ್ಖಂಡ್ ನಿವಾಸಿ ಮಹಿಳೆಗೆ 108 ಆಂಬುಲೆನ್ಸ್ ಸಿಬ್ಬಂದಿಯಿಂದ ಸುಖ ಪ್ರಸವ
0
ಜನವರಿ 11, 2023