ಕವರತ್ತಿ: ಮಾಜಿ ಕೇಂದ್ರ ಸಚಿವರೊಬ್ಬರ ಅಳಿಯನ ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪದ ಲೋಕಸಭಾ ಸದಸ್ಯ ಮೊಹಮ್ಮದ್ ಫೈಜಲ್ ಹಾಗೂ ನಾಲ್ವರು ಸಹಚರರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಸ್ಥಳೀಯ ನ್ಯಾಯಾಲಯ ಆದೇಶ ನೀಡಿದೆ. ಕವರತ್ತಿ ಜಿಲ್ಲಾ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಕೇಂದ್ರದ ಮಾಜಿ ಸಚಿವ ಪಿ.ಎಂ ಸಯ್ಯದ್ ಅವರ ಅಳಿಯ ಪದನಾಥ್ ಸಾಲಿಹ್ ಅವರನ್ನು ರಾಜಕಿಯ ವೈಷ್ಯಮ್ಯದಿಂದ ಮೊಹಮ್ಮದ್ ಫೈಜಲ್ ಹಾಗೂ ಅವರ ನಾಲ್ವರು ಸಹಚರರು ಸೇರಿಕೊಂಡು 2009ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೊಲೆಗೆ ಯತ್ನಿಸಿದ್ದರು ಎಂಬ ಆರೋಪವಿತ್ತು.
ಪ್ರಕರಣ ಸಾಬೀತಾಗಿದ್ದರಿಂದ ಮೊಹಮ್ಮದ್ ಫೈಜಲ್ ಹಾಗೂ ಇತರ ನಾಲ್ವರು ಅಪರಾಧಿಗಳಿಗೆ 10 ವರ್ಷ ಜೈಲು, ತಲಾ ₹1ಲಕ್ಷ ದಂಡ ವಿಧಿಸಲಾಗಿದೆ ಎಂದು ಕೊಲೆಯಾದ ಪದನಾಥ್ ಅವರ ಪರ ವಕೀಲ ತಿಳಿಸಿದ್ದಾರೆ.
ಕೋರ್ಟ್ ಆದೇಶದ ಬಗ್ಗೆ ಮೊಹಮ್ಮದ್ ಫೈಜಲ್ ಪಿಟಿಐನೊಂದಿಗೆ ಮಾತನಾಡಿ, ರಾಜಕೀಯ ದ್ವೇಷದಿಂದ ನನ್ನ ಮೇಲೆ ಸುಳ್ಳು ಪ್ರಕರಣ ಹಾಕಿ ಜೈಲಿಗೆ ಕಳಿಸುವಂತೆ ಮಾಡಿದ್ದಾರೆ. ಈ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದ್ದಾರೆ.
ಕೇರಳ ಕರಾವಳಿಯಲ್ಲಿರುವ ಲಕ್ಷದ್ವೀಪ ಸಮೂಹವನ್ನು ಒಟ್ಟುಗೂಡಿಸಿ ಒಂದು ಲೋಕಸಭಾ ಕ್ಷೇತ್ರವನ್ನು ರಚಿಸಲಾಗಿದೆ. ಇದು ಎಸ್‌ಟಿ ಮೀಸಲು ಕ್ಷೇತ್ರವಾಗಿದ್ದು, ಅತ್ಯಂತ ಚಿಕ್ಕ ಲೋಕಸಭಾ ಕ್ಷೇತ್ರವಾಗಿದೆ. ಇಲ್ಲಿ 49,000 ಮತದಾರರು ಇದ್ದಾರೆ.