ತ್ರಿಪುರಾ: ಹಲವು ವೈದ್ಯರು ತಮ್ಮನ್ನು ಸಕ್ರೀಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ವೈದ್ಯ ಪದವೀಧರರಲ್ಲದೇ, ಇಂಜಿನಿಯರಿಂಗ್, ಸೇನೆ, ವಕೀಲ ವೃತ್ತಿ, ಕೃಷಿ, ಉದ್ಯಮ ಮುಂತಾದ ಕ್ಷೇತ್ರಗಳಿಂದ ಬಂದವರು ಇಂದು ಪ್ರಬಲ ರಾಜಕೀಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಹೀಗೆ ವಿವಿಧ ಕ್ಷೇತ್ರಗಳಿಂದ ಬಂದ ನಾಯಕರಿಗೆ ರಾಜಕೀಯದ ಬಿಡುವಿಲ್ಲದ ಚಟುವಟಿಕೆಯಿಂದಾಗಿ ಮತ್ತೆ ತಮ್ಮ ಹಳೆಯ ಕ್ಷೇತ್ರಕ್ಕೆ ಹಿಂತಿರುಗಿ ಹೋಗಲು ಸಾಧ್ಯವಾಗುವುದು ಕಡಿಮೆ. ಹೀಗಾಗಿ ತಮ್ಮ ಕ್ಷೇತ್ರವನ್ನು ಹವ್ಯಾಸವಾಗಿ ಮುಂದುವರಿಸಿಕೊಂಡು ಹೋಗಬೇಕಾದ ಸಂದರ್ಭವೂ ಬಂದೊದಗುತ್ತದೆ.
ವೈದ್ಯಕೀಯ ಕ್ಷೇತ್ರದಿಂದ ರಾಜಕೀಯಕ್ಕೆ ಬಂದಂತಹ ನಾಯಕರಿಗೆ ರಾಜಕೀಯ ಚಟುವಟಿಕೆಗಳನ್ನು ಬದಿಗಿರಿಸಿ ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಮುಖ್ಯಮಂತ್ರಿಯಾದ ನಾಯಕನಿಗೆ ಸಂಪೂರ್ಣ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ ಸವಾಲಿರುತ್ತದೆ. ಇದರ ನಡುವೆ ತಾನು ವೈದ್ಯಕೀಯ ಶಿಕ್ಷಣ ಪಡೆದಿದ್ದೇನೆ, ಹೀಗಾಗಿ ಮುಖ್ಯಮಂತ್ರಿ ಕೆಲಸದ ನಡುವೆ ಒಂದೆರಡು ದಿನ ವೈದ್ಯನಾಗಿ ಕೆಲಸ ಮಾಡುತ್ತೇನೆ ಎನ್ನಲು ಸಾಧ್ಯವಾಗುವುದಿಲ್ಲ.
ಆದರೆ ಇದೀಗ ತ್ರಿಪುರಾ ಮುಖ್ಯಮಂತ್ರಿ ಡಾ. ಮಾಣಿಕ್ ಸಾಹಾ 10 ವರ್ಷದ ಬಾಲಕನೊಬ್ಬನಿಗೆ ಯಶಸ್ವಿಯಾಗಿ ಹಲ್ಲಿನ ಶಸ್ತ್ರ ಚಿಕಿತ್ಸೆ ಮಾಡಿ ತಮ್ಮ ಕರ್ತವ್ಯಕ್ಕೆ ಬದ್ಧರಾಗಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ.
ತ್ರಿಪುರಾ ಮುಖ್ಯಮಂತ್ರಿ ಡಾ. ಮಾಣಿಕ್ ಸಾಹಾ ವೃತ್ತಿಯಲ್ಲಿ ವೈದ್ಯರಾಗಿದ್ದವರು. ನಂತರ ಭಾರತೀಯ ಜನತಾ ಪಾರ್ಟಿಯ ಮುಖಾಂತರ ರಾಜಕೀಯಕ್ಕೆ ಬಂದು ಇದೀಗ ರಾಜ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸದ್ಯ ಸುದೀರ್ಘ ಸಮಯದ ನಂತರ ಮಾಣಿಕ್ ಸಾಹಾ ತಮ್ಮ ಹಳೆಯ ಕಾರ್ಯಸ್ಥಳವಾದ ತ್ರಿಪುರಾ ವೈದ್ಯಕೀಯ ಕಾಲೇಜಿಗೆ ತೆರಳಿ ಅಲ್ಲಿನ ವೈದ್ಯಕೀಯ ತಂಡದೊಂದಿಗೆ ಬಾಲಕನ ಬಾಯಿಯ ಸಿಸ್ಟಿಕ್ ಲೆಸಿಯಾನ್‌ಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ತಾವು ಶಸ್ತ್ರ ಚಿಕಿತ್ಸೆ ಮಾಡುತ್ತಿರುವ ಫೋಟೋಗಳನ್ನು ಇದೀಗ ಮುಖ್ಯಮಂತ್ರಿ ಮಾಣಿಕ್ ಸಾಹಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಮಾಣಿಕ್ ಸಾಹಾ, ಸುದೀರ್ಘ ಸಮಯದ ನಂತರ ಶಸ್ತ್ರಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಅನುಭವಿ ವೈದ್ಯರ ತಂಡದ ಸಹಕಾರದೊಂದಿಗೆ ಅರ್ಧ ಗಂಟೆಯಲ್ಲಿ ಶಸ್ತ್ರ ಚಿಕಿತ್ಸಾ ಕೆಲಸ ಮುಗಿದಿದ್ದು, ಬಾಲಕ ಸಂಪೂರ್ಣವಾಗಿ ಗುಣಮುಖನಾಗಲಿದ್ದಾನೆ ಎಂದು ಹೇಳಿದ್ದಾರೆ.