ನವದೆಹಲಿ: 'ಕಳೆದ ಡಿಸೆಂಬರ್ 24ರಿಂದ ಇದೇ 3ರವರೆಗೆ ವಿದೇಶಿ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, 124 ಪ್ರಯಾಣಿಕರಲ್ಲಿ ಒಮೈಕ್ರಾನ್ ವೈರಾಣುವಿನ 11 ಉಪತಳಿಗಳು ಪತ್ತೆಯಾಗಿವೆ' ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
'ಈ ಎಲ್ಲ ಉಪತಳಿಗಳು ಈ ಮುನ್ನ ಭಾರತದಲ್ಲಿ ವರದಿಯಾಗಿವೆ' ಎಂದೂ ಅವರು ಹೇಳಿದರು.
'ವಿಮಾನ, ಹಡಗು ಹಾಗೂ ಭೂ ಸಾರಿಗೆ ಮೂಲಕ ದೇಶಕ್ಕೆ ಬಂದ ಒಟ್ಟು 19,277 ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಈ ಪ್ರಯಾಣಿಕರಲ್ಲಿ 12 ಮಂದಿಗೆ ಸೋಂಕು ದೃಢಪಟ್ಟಿದೆ. ಇವರೆಲ್ಲರನ್ನೂ ಪ್ರತ್ಯೇಕವಾಗಿರಿಸಲಾಗಿದೆ' ಎಂದರು. 14 ಮಾದರಿಗಳಲ್ಲಿ ಎಕ್ಸ್‌ಬಿಬಿ ಹಾಗೂ ಒಂದು ಮಾದರಿಯಲ್ಲಿ ಬಿಎಫ್.7.4.1 ಉಪತಳಿ ಪತ್ತೆಯಾಗಿದೆ.
ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಪ್ರತಿಕ್ರಿಯಿಸಿದ್ದು, ಅನವಶ್ಯಕವಾಗಿ ಯಾರೂ ಗಾಬರಿಯಾಗಬಾರದು. ಆದರೆ, ಸದಾ ಎಚ್ಚರಿಕೆಯಿಂದಿರಿ. ಸರ್ಕಾರ ಹೊರಡಿಸಿರುವ ನಿರ್ದೇಶನಗಳನ್ನು ಅನುಸರಿಸಿ. ಕೋವಿಡ್‌ಗೆ ಸಂಬಂಧಿಸಿದಂತೆ ತಪ್ಪು ದಾರಿಗೆ ಎಳೆಯುವ ಯಾವುದೇ ವರದಿಗೆ ಕಿವಿಗೊಡಬೇಡಿ ಎಂದು ನಾಗರಿಕರಲ್ಲಿ ಕೇಳಿಕೊಂಡಿದ್ದಾರೆ.