ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಹೈಕೋರ್ಟ್‌ಗಳಿಗೆ ಹಿಂದುಳಿದ ವರ್ಗದಿಂದ ಕೇವಲ ಶೇ 15ರಷ್ಟು ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ ಎಂದು ನ್ಯಾಯ ವಿಭಾಗವು ಸಂಸದೀಯ ಸಮಿತಿಗೆ ಹೇಳಿದೆ.
ನ್ಯಾಯಾದೀಶರ ನೇಮಕಾತಿ ವಿಚಾರದಲ್ಲಿ ನ್ಯಾಯಾಂಗವು ಪ್ರಾಮುಖ್ಯತೆ ಪಡೆದು ಮೂರು ದಶಕಗಳೇ ಕಳೆದಿದ್ದರೂ ಅದು ಎಲ್ಲರನ್ನೂ ಒಳಗೊಳ್ಳುವ ಮತ್ತು ಸಾಮಾಜಿಕ ವೈವಿಧ್ಯವನ್ನು ಹೊಂದುವ ವ್ಯವಸ್ಥೆಯಾಗಿ ಬದಲಾಗಿಲ್ಲ ಎಂದು ನ್ಯಾಯ ವಿಭಾಗವು ಒತ್ತಿ ಹೇಳಿದೆ.
ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ವ್ಯವಸ್ಥೆಯು ಉನ್ನತ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳ ನೇಮಕಾತಿಗೆ ಶಿಫಾರಸು ಮಾಡುವ ಬಗ್ಗೆ ಮಾತನಾಡಿದ ನ್ಯಾಯ ವಿಭಾಗವು, ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ ಮತ್ತು ಮಹಿಳೆಯರ ಪೈಕಿ ಸೂಕ್ತ ಅಭ್ಯರ್ಥಿಗಳನ್ನು ಶಿಫಾರಸು ಮಾಡುವ ಮೂಲಕ ಸಾಮಾಜಿತ ವೈವಿಧ್ಯತೆಗಳನ್ನು ಕಾಪಾಡುವುದು ಅದರ ಪ್ರಮುಖ ಜವಾಬ್ದಾರಿ ಎಂದಿದೆ.
ಈಗ ಸರ್ಕಾರವು ಕೊಲಿಜಿಯಂ ಶಿಫಾರಸು ಮಾಡಿದವರನ್ನಷ್ಟೇ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಬಹುದು ಎಂಬುದನ್ನು ನ್ಯಾಯ ವಿಭಾಗವು ಸಂಸದೀಯ ಸಮಿತಿಗೆ ನೀಡಿದ ಪ್ರಸ್ತುತಿಯಲ್ಲಿ ತಿಳಿಸಿದೆ.
ನ್ಯಾಯ ವಿಭಾಗವು ನೀಡಿದ ಮಾಹಿತಿ ಪ್ರಕಾರ 2018ರಿಂದ ಡಿಸೆಂಬರ್ 19, 2022ರ ವರೆಗೆ ಒಟ್ಟು 537 ನ್ಯಾಯಮೂರ್ತಿಗಳನ್ನು ಹೈಕೋರ್ಟ್‌ಗಳಿಗೆ ನೇಮಕ ಮಾಡಲಾಗಿದೆ. ಈ ಪೈಕಿ ಶೇ 1.3ರಷ್ಟು ಎಸ್‌ಟಿ, ಶೇ 2.8ರಷ್ಟು ಎಸ್‌ಸಿ ಮತ್ತು ಶೇ 2.6ರಷ್ಟು ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಾಗಿದ್ದಾರೆ.
ಈ ಅವಧಿಯಲ್ಲಿ 20 ನೇಮಕಾತಿಗಳಿಗೆ ಸಾಮಾಜಿಕ ಹಿನ್ನೆಲೆಯ ಮಾಹಿತಿ ಲಭ್ಯವಾಗಿಲ್ಲ ಎಂದು ನ್ಯಾಯ ವಿಭಾಗ ತಿಳಿಸಿದೆ.
ಸುಪ್ರೀಂ ಕೋರ್ಟ್ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ)ವನ್ನು ಸಂವಿಧಾನ ಬಾಹಿರ ಮತ್ತು ಅಸಿಂಧು ಎಂದು ಘೋಷಿಸಿದೆ.