ಕೊಲ್ಲಂ: ಕೊಲ್ಲಂ ಆರ್ಯನಕಾವು ಗಡಿ ತಪಾಸಣಾ ಕೇಂದ್ರದಲ್ಲಿ 15,300 ಲೀಟರ್ ಕಲಬೆರಕೆ ಹಾಲು ಸಾಗಿಸುತ್ತಿದ್ದ ಟ್ಯಾಂಕರ್ ಅನ್ನು ಹೈನುಗಾರಿಕೆ ಇಲಾಖೆ ಬುಧವಾರ ವಶಪಡಿಸಿಕೊಂಡಿದೆ.
ಅಧಿಕಾರಿಗಳ ಪ್ರಕಾರ, ವಶಪಡಿಸಿಕೊಂಡಿರುವ ಹಾಲಿನಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಮಿಶ್ರಣ ಮಾಡಲಾಗಿದೆ.
ತಮಿಳುನಾಡಿನ ವಿರುದುನಗರ ಜಿಲ್ಲೆಯ ವಡಿಯೂರ್ ಗ್ರಾಮದಿಂದ ಈ ಹಾಲನ್ನು ತರಲಾಗಿದ್ದು, ಪತ್ತನಂತಿಟ್ಟದ ಪಂದಳಂಗೆ ಈ ಟ್ಯಾಂಕ್ ತೆರಳುತ್ತಿತ್ತು. ಪುನಲೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆ ಹಾಲಿನ ಟ್ಯಾಂಕರ್ ಅನ್ನು ವಶಕ್ಕೆ ಪಡೆದಿದೆ.
ಆಹಾರ ಸುರಕ್ಷತಾ ಇಲಾಖೆಯು ಹಾಲಿನಲ್ಲಿರುವ ಹೈಡ್ರೋಜನ್ ಪೆರಾಕ್ಸೈಡ್ ಶೇಕಡಾವಾರು ಪ್ರಮಾಣವನ್ನು ಪರೀಕ್ಷಿಸಲು ತಿರುವನಂತಪುರಂನಲ್ಲಿರುವ ಲ್ಯಾಬ್‌ಗೆ ಈ ಹಾಲಿನ ಮಾದರಿಯನ್ನು ಕಳುಹಿಸಿದೆ. ಅದರ ಫಲಿತಾಂಶ ಇಂದು ಬರಲಿದ್ದು, ಫಲಿತಾಂಶದ ಆಧಾರದ ಮೇಲೆ ನಾವು ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಕೊಲ್ಲಂನ ಆಹಾರ ಸುರಕ್ಷತಾ ಇಲಾಖೆಯ ನೋಡಲ್ ಅಧಿಕಾರಿ ಸುಜಿತ್ ಅವರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ತಪಾಸಣೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.