ನವದೆಹಲಿ:ಗಮನಾರ್ಹ ನಡೆಯೊಂದರಲ್ಲಿ, ಹೇಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ 16-18 ವಯೋಮಾನದ ಗುಂಪಿನ ಮಕ್ಕಳನ್ನು ಮಕ್ಕಳ ನ್ಯಾಯಾಲಯದಲ್ಲಿ ಪ್ರಾಪ್ತ ವಯಸ್ಕರು ಎಂದು ಪರಿಗಣಿಸಲು ಸಾಧ್ಯವೇ ಎಂಬುದನ್ನು ನಿರ್ಧರಿಸಲು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗವು ವಿಶಾಲ ಸಮಾನ ಚೌಕಟ್ಟನ್ನು ರೂಪಿಸಲು ಪ್ರಾಥಮಿಕ ಮೌಲ್ಯಮಾಪನ ಕೈಗೊಂಡು, ಅದಕ್ಕಾಗಿ ಮಾರ್ಗಸೂಚಿ ಕರಡನ್ನು ಸಿದ್ಧಪಡಿಸಿದ್ದು, ಅದನ್ನು ಸಾರ್ವಜನಿಕರ ಪ್ರತಿಕ್ರಿಯೆಗಾಗಿ ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದೆ ಎಂದು timesofindia.com ವರದಿ ಮಾಡಿದೆ.
ಈ ಕುರಿತು ಕಳೆದ ವರ್ಷ ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನದ ಅನುಸಾರ ಮಾರ್ಗಸೂಚಿ ಕರಡನ್ನು ಸಿದ್ಧಪಡಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗವು, ಜನವರಿ 20ರಂದು ಅದನ್ನು ಸಾರ್ವಜನಿಕರ ಪ್ರತಿಕ್ರಿಯೆಗಾಗಿ ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದೆ.
ಅಪ್ರಾಪ್ತರ ನ್ಯಾಯ ಕಾಯ್ದೆ, 2015ರ ಕಾನೂನಿನ ನಿರ್ದಿಷ್ಟ ಸೆಕ್ಷನ್ ಒಂದರ ಪ್ರಕಾರ, "16 ವರ್ಷ ಪೂರೈಸಿರುವ ಅಥವಾ ಅದಕ್ಕೂ ಮೇಲ್ಪಟ್ಟ ವಯಸ್ಸಿನ ಮಕ್ಕಳು ಹೇಯ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಗುರಿಯಾಗಿದ್ದರೆ, ಅಪ್ತಾಪ್ತರ ನ್ಯಾಯ ಮಂಡಳಿಯು ಅಂತಹ ಅಪರಾಧ ಕೃತ್ಯದಲ್ಲಿ ಭಾಗಿಯಾಗುವ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಆ ಮಕ್ಕಳು ಹೊಂದಿದ್ದಾರೆಯೆ, ಅಂತಹ ಅಪರಾಧ ಕೃತ್ಯಗಳಿಂದ ಎದುರಾಗುವ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಲು ಶಕ್ತರಾಗಿದ್ದಾರೆಯೆ ಮತ್ತು ಎಂತಹ ಸಂದರ್ಭದಲ್ಲಿ ಅವರು ಅಂತಹ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂಬ ಕುರಿತು ಪ್ರಾಥಮಿಕ ಮೌಲ್ಯಮಾಪನ ನಡೆಸಿದ ನಂತರ ಅಂತಹ ಮಕ್ಕಳನ್ನು ಪ್ರಾಪ್ತ ವಯಸ್ಕರು ಎಂದು ಪರಿಗಣಿಸಿ ವಿಚಾರಣೆಗೆ ಒಳಪಡಿಸಬಹುದೆ ಎಂಬ ಕುರಿತು ಆದೇಶ ಹೊರಡಿಸಬಹುದು" ಎಂದು ಹೇಳುತ್ತದೆ.
ಪ್ರಾಥಮಿಕ ಮೌಲ್ಯಮಾಪನ ಮಾರ್ಗಸೂಚಿ ಕರಡಿನಲ್ಲಿ ಮಕ್ಕಳ ನ್ಯಾಯಾಲಯಕ್ಕೆ ಅಪ್ರಾಪ್ತರ ನ್ಯಾಯ ಮಂಡಳಿ ಅಂತಿಮ ವರದಿ ಸಲ್ಲಿಸುವಾಗ ಪರಿಗಣಿಸಬೇಕಾದ ಅಗತ್ಯ ಸಂಗತಿಗಳ ಕುರಿತು ಪ್ರಸ್ತಾಪಿಸಲಾಗಿದೆ. ಅದರನ್ವಯ, ಇನ್ನಿತರ ಸಂಗತಿಗಳೊಂದಿಗೆ ವರದಿಯು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಮಗುವಿನ ಸಾಮಾಜಿಕ-ಪ್ರಾದೇಶಿಕ ವಿವರಗಳು, ಅಪ್ರಾಪ್ತರ ನ್ಯಾಯ ಮಂಡಳಿ ಅನುಸರಿಸಿರುವ ಕ್ರಮಗಳ ವಿವರಗಳು, ಒಳಪಡಿಸಲಾದ ಮಾನಸಿಕ ಪರೀಕ್ಷೆಗಳು ಸೇರಿದಂತೆ ಮಾನಸಿಕ ವೈದ್ಯರು ಮತ್ತು ಇತರೆ ತಜ್ಞರ ಅಭಿಪ್ರಾಯಗಳನ್ನು ನಮೂದಿಸಬೇಕು ಎಂದು ಸೂಚಿಸಲಾಗಿದೆ.
ಪ್ರಾಥಮಿಕ ಮೌಲ್ಯಮಾಪನದ ಗುರಿಯು ಅಪ್ರಾಪ್ತರಿಂದ ತಪ್ಪೊಪ್ಪಿಗೆ ಪಡೆಯುವುದಾಗಲಿ ಅಥವಾ ಇನ್ನಾವುದೇ ನಿರ್ಧಾರಕ್ಕೆ ತಲುಪುವುದಾಗಲಿ ಅಲ್ಲ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಯಾವುದೇ ಪಕ್ಷಪಾತ ಇಲ್ಲದಿರುವುದನ್ನು ಖಾತ್ರಿಪಡಿಸಲು, ಅಂತಿಮ ವರದಿಯಲ್ಲಿ ಅಪ್ರಾಪ್ತರಿಂದ ಯಾವುದೇ ಬಗೆಯ ಲಿಖಿತ ಅಥವಾ ಮೌಖಿಕ ಹೇಳಿಕೆ, ಇತರೆ ವ್ಯಕ್ತಿಗಳ ಸಂದರ್ಶನ, ಮೌಲ್ಯಮಾಪನದಲ್ಲಿ ಗಮನಕ್ಕೆ ಬಂದ ಸಂಗತಿಗಳ ವಿವರಗಳು ಅಥವಾ ತಪ್ಪು ಹೊರಿಸುವ ಸ್ವರೂಪದ ಹೇಳಿಕೆ ಅಥವಾ ದಾಖಲೆಗಳನ್ನು ಒಳಗೊಂಡಿರಬಾರದು ಎಂದು ಸೂಚಿಸಲಾಗಿದೆ.
"ತಜ್ಞರು ಯಾವುದೇ ಬಗೆಯ ನಿರ್ದಿಷ್ಟ ಮೌಲ್ಯಮಾಪನ ಸಾಧನಗಳಿಗೆ ಸೀಮಿತಗೊಳ್ಳದಂತೆ ಮಾರ್ಗಸೂಚಿಯನ್ನು ರೂಪಿಸಲಾಗಿದೆ. ಸಂದರ್ಭದ ಸಂದಿಗ್ಧತೆಯನ್ನು ಅರ್ಥ ಮಾಡಿಕೊಳ್ಳಲು ಕೈಗೊಳ್ಳಬೇಕಾದ ಪ್ರಕ್ರಿಯೆ ಮತ್ತು ಕ್ರಮಗಳ ಬಗ್ಗೆ ಅಳವಡಿಸಿಕೊಳ್ಳಬೇಕಾದ ಅತ್ಯಗತ್ಯ ಸಾಧನಗಳು ಹಾಗೂ ಮೂಲಭೂತ ತಾಂತ್ರಿಕತೆಯನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ರೂಪಿಸಲಾಗಿದೆ" ಎಂದು ಕರಡು ವರದಿಯಲ್ಲಿ ಪ್ರತಿಪಾದಿಸಲಾಗಿದೆ.