ಉಪ್ಪಳ: ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಸಂಘ ಬಾಯಾರು ಇದರ ಪ್ರಥಮ ವಾರ್ಷಿಕ ಜ.16ರಂದು ಆವಳ ಮಠದಲ್ಲಿ ಜರಗಲಿದೆ. ಈ ವೇಳೆ ಸಂಘದ ನಿರ್ದೇಶಕ, ಭಾಗವತ ಜಿ.ಕೆ.ನಾವಡರಿಗೆ ಸನ್ಮಾನ ಗೌರವ ಸಲ್ಲಲಿದೆ. ಗಡಿನಾಡಿನ ಹಿರಿಯ ಭಾಗವತರ ಕುರಿತು ಕಿರು ಬರಹ...
ತೆಂಕಣ ಯಕ್ಷಗಾನದ ಗಾನಪರಂಪರೆಯ ಅಚ್ಚಳಿಯದ ಹೆಸರು ಪುತ್ತಿಗೆ ಪರಂಪರೆ. ಇದು ಪುತ್ತಿಗೆ ಜೋಯಿಸ ಭಾಗವತರ ಮೂಲಕ ವಂಶವಾಹಿನಿಯಾಗಿ ಹರಿದ ತೆಂಕುತಿಟ್ಟಿನ ಗಾನರಸಧಾರೆ. ಈ ಪರಂಪರೆಯ ಕೊಂಡಿಯೇ ಜಿ.ಕೆ.ನಾವಡರೆಂಬ ಬಾಯಾರು ಪೆಲತ್ತಡ್ಕ ನಿವಾಸಿ ಗೋಪಾಲಕೃಷ್ಣ ನಾವಡ. ಯಕ್ಷಗಾನವು ಕ್ರಾಂತಿಯ ದಿನಗಳನ್ನು ಕಂಡ 85-90ರ ದಶಕದಲ್ಲಿ ವಿವಿಧ ಮೇಳಗಳಲ್ಲಿ ತಿರುಗಾಟಗೈದು ಆಗಿನ ಸಾಮಾಜಿಕ-ಪಾರಾಣಿಕ ಪ್ರಸಂಗಗಳನ್ನು ರಂಗದಲ್ಲಿ ಪ್ರದರ್ಶನದ ಮೂಲಕ ವಿಜೃಂಭಿಸಿ ಮನೆಮಾತಾಗಿದ್ದ ಜಿ.ಕೆ ನಾವಡರು ದಿಢೀರನೆ ವೃತ್ತಿಮೇಳಕ್ಕೆ ವಿದಾಯ ಹೇಳಿದ್ದು ಅವರ ವೈಯ್ಯುಕ್ತಿಕ ನಿರ್ಧಾರವಾದರೂ ಅವರೇನೂ ಯಕ್ಷಗಾನದಿಂದಲೇ ಹಿಂದೆ ಸರಿದಿರಲಿಲ್ಲ..
ಅವರಿಗೀಗ 60ರ ಹರೆಯ. ಈ ಸಂದರ್ಭದಲ್ಲಿ ತನ್ನೂರಿನಲ್ಲೇ ಅಭಿಮಾನದ ಸನ್ಮಾನ ಗೌರವ ಸಲ್ಲುತ್ತಿರುವುದು ಅವರೊಳಗಿನ ಕಲೆಗೆ ಮತ್ತದರ ಪ್ರತಿಭೆಗೆ ಸಿಗುವ ಮಾನ್ಯತೆ. ಬಾಯಾರು ಪೆಲತ್ತಡ್ಕದ ಶಂಕರನಾರಾಯಣ ನಾವಡ, ಲಕ್ಷ್ಮಿ ಅಮ್ಮ ದಂಪತಿಯ ಪುತ್ರನಾದ ಇವರಿಗೆ ಯಕ್ಷಗಾನ ಭಾಗವತಿಕೆಯ ಪ್ರತಿಭೆ ಕೌಟುಂಬಿಕ ಬಳುವಳಿ. ಅವರದ್ದು ಪ್ರಸಿದ್ಧ ಪುತ್ತಿಗೆ ಪರಂಪರೆ. ಅವರಮ್ಮ ಲಕ್ಷ್ಮಿ ಅಮ್ಮನವರಿಗೆ ಅನೇಕ ಪ್ರಸಂಗಗಳ ಪಧ್ಯಗಳು ಕಂಠಸ್ಥ. ಅವರು ಅಡುಗೆ ಮನೆಯಲ್ಲಿ ಪಾಚಕದಲ್ಲಿದ್ದರೂ ಯಕ್ಷಗಾನದ ಪದ ಲೀಲಾಜಾಲ ಹಾಡುತ್ತಿದ್ದವರು!
ಇಂಥ ಕುಟುಂಬದಲ್ಲಿ ಜನಿಸಿದ ಗೋಪಾಲಕೃಷ್ಣ ನಾವಡರು ಮನೆಯಲ್ಲೇ ಮಾಂಬಾಡಿ ಗುರುಗಳಿಂದ ಯಕ್ಷಗಾನ ಪದ್ಯಗಳನ್ನು ಶಾಸ್ತ್ರೀಯವಾಗಿ ಕಲಿತರು. ಬಳಿಕ ಮಲ್ಲ, ಮಧೂರು(ಟೆಂಟ್ , ಬಯಲಾಟ),ಬಪ್ಪನಾಡು, ಕಾಟಿಪಳ್ಳ, ಕಾಟಿಪಳ್ಳ ಮಹಿಳಾ ಯಕ್ಷಗಾನ ಮಂಡಳಿ ಮೊದಲಾದವುಗಳಲ್ಲಿ 15ವರ್ಷದ ತಿರುಗಾಟಗೈದು ಯಕ್ಷಗಾನದ ವ್ಯಾವಸಾಯಿಕ ತಿರುಗಾಟಕ್ಕೆ ವಿದಾಯ ಹೇಳಿದರು. ಹಾಗೆಂದು ಯಕ್ಷಗಾನದ ಸಂಸರ್ಗವನ್ನೇ ತೊರೆಯಲಿಲ್ಲ. ಕೆಲವು ಮೇಳಗಳಿಗೆ ಅತಿಥಿಯಾಗಿ ಹೋದರು. ಸಂಘ, ಸಂಸ್ಥೆಗಳ ಬಯಲಾಟಕ್ಕೆ ಆಹ್ವಾನಿತರಾದರು. ಬಾಯಾರು, ಕುರುಡಪದವು ಪರಿಸರದ ಹವ್ಯಾಸಿ, ಮಕ್ಕಳ ಯಕ್ಷಗಾನದಲ್ಲಿ ಸಕ್ರಿಯರಾಗಿದ್ದರು. ಜತೆಗೆ ತಾನೇ ಹವ್ಯಾಸಿ, ವಿದ್ಯಾರ್ಥಿ ಸಂಘ ಕಟ್ಟಿ ಪ್ರದರ್ಶನವನ್ನಿತ್ತು ಅನೇಕರನ್ನು ಮುನ್ನೆಲೆಗೆ ತಂದರು, ಹಲವರ ಪ್ರತಿಭೆಗೆ ಪೋಷಣೆ ಇತ್ತರು.
ಜರ್ಮನಿಯಲ್ಲಿ ನಡೆದ ಬರ್ಲಿನ್ ಉತ್ಸವ, ಅಮೇರಿಕಾದ ಅಕ್ಕ ಸಮ್ಮೇಳನ ಮತ್ತು ಭಾರತದ ವಿವಿದೆಡೆ ನಡೆದ ಹಲವು ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವತರಾಗಿ ಪಾಲ್ಗೊಂಡ ಅವರದ್ದು ಭಾವುಕ ಕಂಠಸಿರಿ. ರಾಗಗಳನ್ನು ಸೊಗಸಾಗಿ ಬೆಸೆಯಬಲ್ಲವರು. ರಂಗದ ಸನ್ನಿವೇಶಕ್ಕೆ ತಕ್ಕ ಪದ್ಯದ ಪದವೊಡೆದು ಹಾಡುತ್ತಾ ಕಲಾವಿದರಿಗೂ, ಪ್ರೇಕ್ಷಕರಿಗೂ ಅನುಭಾವ ನೀಡುವವರು. ವಿಶೇಷವಾಗಿ ಪದ್ಯವನ್ನು ಎಳೆದೆಳೆದು ಹಾಡುವ ಗಾನಸಂಸ್ಕøತಿ ವ್ಯಾಪಕಗೊಳ್ಳುವ ಮುನ್ನ ಮಾಂಬಾಡಿ ಶಿಷ್ಯರಾಗಿ ಅರಳಿದ ಇವರು ಮೇಳ ತಿರುಗಾಟದಲ್ಲೇ ಸಕ್ರಿಯರಾಗಿ ಭಾಗವತಿಕೆಯಲ್ಲೇ ಮಗ್ನರಾಗಿರುತ್ತಿದ್ದರೆ ಇಂದೀಗ ತೆಂಕಣದ ಅಗ್ರಸ್ಥಾನೀಯ ಭಾಗವತರ ಸಾಲಲ್ಲಿ ಕೂರಬೇಕಾಗಿದ್ದವರು. ಭಾಗವತಿಕೆಯ ರಾಗಬಳಕೆ, ಪದ್ಯದ ಹರಿವಿನ ರಾಗಸಂಚಾರದ ತಜ್ಞತೆಯುಳ್ಳ ಇವರು ಅನುಭವಿ ಕಲಾವಿದ.
ಕಳೆದ 25ವರ್ಷಗಳಿಂದ ಬಾಯಾರು ಪರಿಸರದಲ್ಲಿ ಹಿಮ್ಮೇಳ ತರಬೇತಿ, ಮಾರ್ಗದರ್ಶನ ನೀಡುತ್ತಾ ಅನೇಕ ಶಿಷ್ಯರನ್ನು ತಯಾರಿಸಿರುವ ಇವರು ಈಗ ಮಕ್ಕಳ ಯಕ್ಷಶಿಕ್ಷಣದತ್ತ ವಿಶೇಷ ಒಲವು ಹರಿಸಿದ್ದಾರೆ. ಈ ದೃಷ್ಟಿಯಲ್ಲೇ ಶ್ರೀ ಮಹಾಮ್ಮಾಯಿ ಯಕ್ಷಗಾನ ಸಂಘ ಬಾಯಾರು ಇದನ್ನು ಮುನ್ನಡೆಸಿ, ತನ್ಮುಖೇನ ಹವ್ಯಾಸಿ ಅರ್ಥದಾರಿಗಳಿಗೆ ವಾರದಕೂಟದ ಅವಕಾಶ ಒದಗಿಸಿದ್ದಾರೆ. ಇದೇ ವೇದಿಕೆಯಲ್ಲಿ ಉದಯೋನ್ಮುಖ ಬಾಲಪ್ರತಿಭೆಗಳಿಗೆ ಹಿಮ್ಮೇಳದ ಅವಕಾಶಗಳೂ ಒದಗುತ್ತಿದ್ದು ಭರವಸೆಯ ಪ್ರತಿಭೆಗಳು ಉದಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘದ ಮೊದಲ ವಾರ್ಷಿಕದ ಸಂದರ್ಭ ಅವರಿಗೆ ಸನ್ಮಾನ ಗೌರವ ಸಲ್ಲುತ್ತಿದೆ.
- ವಸಂತ ಮಾಸ್ತರ್ ಚೇರಾಲು