ಚಾಯಿಬಾಸಾ : ಹಾಸ್ಟೆಲ್ ವಾರ್ಡನ್ ವಿರುದ್ಧ ಜಾತಿ ನಿಂದನೆ ಹಾಗೂ ತಾರತಮ್ಯದ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡುವ ಸಲುವಾಗಿ ಚಾಯಿಬಾಸಾ ಜಿಲ್ಲೆಯ ವಸತಿಶಾಲೆಯೊಂದರ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ರಾತ್ರಿ ಹೊತ್ತಿನಲ್ಲಿ 17 ಕಿ.ಮೀ ದೂರ ನಡೆದ ಘಟನೆ ಜಾರ್ಖಂಡ್‌ನಲ್ಲಿ ವರದಿಯಾಗಿದೆ.
ಚಾಯಿಬಾಸಾ ಜಿಲ್ಲೆಯ ಖುಂಟ್‌ಪಾನಿಯ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ 11ನೇ ತರಗತಿ ವಿದ್ಯಾರ್ಥಿನಿಯರು ದೂರು ನೀಡಿದವರು. ರಾತ್ರಿಯಿಡೀ ನಿರ್ಜನ ರಸ್ತೆಗಳಲ್ಲಿ ಕಾಲ್ನಡಿಗೆಯಲ್ಲೇ ತೆರಳಿದ ವಿದ್ಯಾರ್ಥಿನಿಯರು ಸೋಮವಾರ ಬೆಳಿಗ್ಗೆ 7 ಗಂಟೆಗೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲಾಧಿಕಾರಿ ಅನನ್ಯ ಮಿತ್ತಲ್ ಅವರ ಬಳಿ ತಲುಪಿ, ವಾರ್ಡನ್ ವಿರುದ್ಧ ದೂರು ನೀಡಿದ್ದಾರೆ.
ವಿದ್ಯಾರ್ಥಿನಿಯರ ಕುಂದುಕೊರತೆ ಆಲಿಸುವಂತೆ ಜಿಲ್ಲಾಧಿಕಾರಿ ಅನನ್ಯ ಅವರು ಜಿಲ್ಲೆಯ ಹಿರಿಯ ಶಿಕ್ಷಣಾಧಿಕಾರಿಗೆ (ಡಿಎಸ್‌ಇ) ಸೂಚನೆ ನೀಡಿದರು. ಅಹವಾಲು ಆಲಿಸಿದ ಶಿಕ್ಷಣಾಧಿಕಾರಿ ಅಭಯ್ ಕುಮಾರ್ ಶಿಲ್ ಅವರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿನಿಯರನ್ನು ವಾಹನಗಳಲ್ಲಿ ಮರಳಿ ವಸತಿಶಾಲೆಗೆ ತಲುಪಿಸಲಾಯಿತು.
ಹಳಸಿದ ಆಹಾರ ತಿನ್ನಲು ಒತ್ತಾಯ: 'ಹಾಸ್ಟೆಲ್ ವಾರ್ಡನ್ ನಮಗೆ ಹಳಸಿದ ಆಹಾರ ತಿನ್ನಲು ಒತ್ತಾಯಿಸುತ್ತಾರೆ. ಶೌಚಾಲಯಗಳನ್ನು ತೊಳೆಯಲು ಹೇಳುತ್ತಾರೆ. ಕೆಳಜಾತಿಯ ವಿದ್ಯಾರ್ಥಿನಿಯರಿಗೆ ಚಾಪೆಯ ಮೇಲೆ, ನೆಲದ ಮೇಲೆ ಮಲಗುವಂತೆ ಸೂಚಿಸುತ್ತಾರೆ. ಇದನ್ನು ವಿರೋಧಿಸಿದವರನ್ನು ವಾರ್ಡನ್ ಥಳಿಸಿದ್ದಾರೆ' ಎಂದು ವಿದ್ಯಾರ್ಥಿನಿಯರು ಡಿಎಸ್‌ಇ ಅವರಿಗೆ ದೂರು ನೀಡಿದ್ದಾರೆ.
'ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಅವರ ಬಳಿ ಸುಳ್ಳು ಹೇಳುವಂತೆಯೂ ವಾರ್ಡನ್ ಒತ್ತಾಯಿಸಿದ್ದಾರೆ' ಎಂದೂ ವಿದ್ಯಾರ್ಥಿನಿಯರು ದೂರಿದ್ದಾರೆ.
ಈ ಬಗ್ಗೆ ತನಿಖೆ ಕೈಗೊಂಡು, ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಸ್‌ಇ ಭರವಸೆ ನೀಡಿದ್ದಾರೆ.
ಚಾಯಿಬಾಸಾಕ್ಕೆ ತಲುಪುತ್ತಿದ್ದಂತೆಯೇ ವಿದ್ಯಾರ್ಥಿನಿಯರು ಸ್ಥಳೀಯ ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗೆ ಕರೆ ಮಾಡಿ ಗೀತಾ ಮಾಹಿತಿ ನೀಡಿದ್ದರು.