ರಜೌರಿ: ರಜೌರಿಯಲ್ಲಿ ಭಯೋತ್ಪಾದಕ ದಾಳಿಯಲ್ಲಿ 7 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡ ಬೆನ್ನಲ್ಲೇ ಅಪ್ಪರ್ ಡಾಂಗ್ರಿ ಗ್ರಾಮದಲ್ಲಿ ಸ್ಫೋಟ ಸಂಭವಿಸಿದ್ದು, ಸಹೋದರ-ಸಹೋದರಿಯರಿಬ್ಬರು ಸಾವನ್ನಪ್ಪಿದ್ದಾರೆ ಇನ್ನೂ 6 ಮಂದಿಗೆ ಗಾಯಗಳಾಗಿವೆ.
ಭಾನುವಾರ ಸಂಜೆ ಪ್ರೀತಮ್ ಲಾಲ್ ಅವರ ಮನೆಯ ಬಳಿ ಸ್ಫೋಟ ಸಂಭವಿಸಿತ್ತು. ಲಾಲ್ ಅವರ ಸಂಬಂಧಿಕರೂ ಸೇರಿದಂತೆ ಹಲವರಿಗೆ ಗಾಯಗಳಾಗಿತ್ತು.
ಗಾಯಾಳುಗಳನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಸಾನ್ವಿ ಶರ್ಮಾ (7) ವಿಹಾನ್ ಕುಮಾರ್ ಶರ್ಮಾ (4) ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ.
ಗ್ರಾಮದಲ್ಲಿ ಮೂರು ಹಿಂದೂಗಳ ಮನೆಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ನಾಲ್ವರನ್ನು
ಹತ್ಯೆ ಮಾಡಿದ 12 ಗಂಟೆಗಳ ಅವಧಿಯಲ್ಲೇ ಈ ಸ್ಫೋಟ ಸಂಭವಿಸಿದ್ದು, ಸ್ಫೋಟದಲ್ಲಿ ಪ್ರೀತಮ್
ಶರ್ಮಾ (55) ಆತನ 33 ವರ್ಷದ ಪುತ್ರ ಆಶೀಷ್ ಕುಮಾರ್, ದೀಪಕ್ ಕುಮಾರ್ (23) ಶೀತಲ್
ಕುಮಾರ್ (48) ಸಾವನ್ನಪ್ಪಿದ್ದಾರೆ.
ಭಯೋತ್ಪಾದಕರ ದಾಳಿ ಬೆನ್ನಲ್ಲೇ ಪೊಲೀಸ್, ಸಿಆರ್ ಪಿಎಫ್ ಹಾಗೂ ಸೇನಾ ಸಿಬ್ಬಂದಿಗಳು
ಸ್ಥಳಕ್ಕೆ ಧಾವಿಸಿದ್ದು, ಭಯೋತ್ಪಾದಕರಿಗಾಗಿ ಶೋಧಕಾರ್ಯಾಚರಣೆ ನಡೆಸಿದ್ದಾರೆ. ಹಲವು
ಸಂಘಟನೆಗಳು ಈ ಪ್ರದೇಶದ ಬಂದ್ ಗೆ ಕರೆ ನೀಡಿದ್ದು, ಪ್ರದೇಶ ಸಂಪೂರ್ಣವಾಗಿ
ಸ್ತಬ್ಧಗೊಂಡಿದೆ.
ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಮನೋಜ್ ಸಿನ್ಹಾ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದ್ದು, ಈ ಘಟನೆಯ ಹಿಂದಿರುವ ಉಗ್ರರನ್ನು ಶಿಕ್ಷಿಸದೇ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಲೆಫ್ಟಿನೆಂಟ್ ಗೌರ್ನರ್ ಮೃತ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿಯನ್ನು ನೀಡುವ ಭರವಸೆ ನೀಡಿದ್ದಾರೆ.