ಕೊಚ್ಚಿ: ಸುಮಾರು 14 ಕೋಟಿ ರೂಪಾಯಿ ವೆಚ್ಚದಲ್ಲಿ ಅನಿವಾಸಿ ಉದ್ಯಮಿ ನಿರ್ಮಾಣ ಮಾಡಿರುವ ಮಕ್ಕಳ ಕ್ರೀಡಾ ಉದ್ಯಾನವನದ ಭಾಗವಾಗಿರುವ ಆರು ಅಂತಸ್ತಿನ ಕಟ್ಟಡಕ್ಕೆ ಅನುಮತಿ ನೀಡಲು 20 ಸಾವಿರ ರೂಪಾಯಿ ಲಂಚ ಹಾಗೂ ಒಂದು ಸ್ಕಾಚ್ಗೆ ಬೇಡಿಕೆ ಇಟ್ಟಿದ್ದ ಪಂಚಾಯಿತಿಯ ಸಹಾಯಕ ಇಂಜಿನಿಯರ್ನನ್ನು ಕೇರಳ ವಿಜಿಲೆನ್ಸ್ ಅಧಿಕಾರಿಗಳು ಬಲೆಗೆ ಬೀಳಿಸಿದ್ದಾರೆ.
ಬಂಧಿತನನ್ನು ಇಟಿ ಅಜಿತ್ ಕುಮಾರ್ (38) ಎಂದು ಗುರುತಿಸಲಾಗಿದೆ. ಈತ ಇರುಂಬಯಂ ವೈಕೋಮ್ ಮೂಲದವನು. ಮಂಜೂರ್ ಪಂಚಾಯಿತಿಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ.
ಕಟ್ಟಡದ ಅನುಮತಿಗಾಗಿ 2020ರಲ್ಲಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ, ಅನುಮತಿಯನ್ನು ನಿರಾಕರಿಸಲಾಯಿತು. ಇದಾದ ಬಳಿಕ ಇದೇ ಜ.23ರಂದು ಇಂಜಿನಿಯರ್ ಅಜಿತ್ ಕುಮಾರ್ನನ್ನು ಖುದ್ದು ಭೇಟಿ ಮಾಡಿದಾಗ, ಪರವಾನಿಗೆ ಪಡೆಯಲು ಏನಾದರೂ ಕೊಡಬೇಕಾಗುತ್ತದೆ ಅಂತಾ ಲಂಚಕ್ಕೆ ಬೇಡಿಕೆ ಇಟ್ಟನು. ಈ ವೇಳೆ ಉದ್ಯಮಿ 5000 ರೂಪಾಯಿಯನ್ನು ಸಹಾಯಕ ಇಂಜಿನಿಯರ್‌ಗೆ ನೀಡಿದ. ಆದರೆ, ಅದು ನಿರೀಕ್ಷೆಗಿಂತ ಕಡಿಮೆಯಾಗಿದೆ ಎಂದು ಆತ ಹೇಳಿದ. ಬಳಿಕ ಉದ್ಯಮಿ ಏನು ಬೇಕಾದರೂ ಪಾವತಿಸಲು ಒಪ್ಪಿಕೊಂಡರು.
ಜ.28 ಬೆಳಗ್ಗೆ ಸಹಾಯಕ ಇಂಜಿನಿಯರ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಅವರು ಕಡತ ಅನುಮೋದನೆಗಾಗಿ 20 ಸಾವಿರ ರೂಪಾಯಿ ಮತ್ತು ಸ್ಕಾಚ್ ಬಾಟಲಿಯನ್ನು ಕೇಳಿದರು ಮತ್ತು ಅದನ್ನು ಕಾರ್ಯದರ್ಶಿಗೆ ಕಳುಹಿಸುವಂತೆ ಇಂಜಿನಿಯರ್ ಹೇಳಿದ್ದ. ಬಳಿಕ ಈ ಸಂಬಂಧ ವಿಜಿಲೆನ್ಸ್ ಎಸ್ಪಿ ವಿ.ಜಿ.ವಿನೋದಕುಮಾರ್ ಅವರಿಗೆ ದೂರು ನೀಡಲಾಗಿತ್ತು. 20 ಸಾವಿರ ರೂ. ಹಣ ನೀಡುವಾಗ ಅಜಿತ್ಕುಮಾರ್ನನ್ನು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಕಚೇರಿ ಅವಧಿಯ ನಂತರ ಬಾಟಲಿ ವಿತರಿಸಬೇಕು ಎಂದು ಹೇಳಿದ್ದರಿಂದ ಬಾಟಲಿ ಸಿಗಲಿಲ್ಲ. ಇಂಜಿನಿಯರ್ ಬಂಧನದ ಬಳಿಕ ವಿಜಿಲೆನ್ಸ್ ಸೂಚನೆಯಂತೆ ಪಂಚಾಯಿತಿ ಕಾರ್ಯದರ್ಶಿ ದಾಖಲೆಗಳನ್ನು ಪರಿಶೀಲಿಸಿ ಉದ್ಯಮಿಗೆ ಪರವಾನಗಿ ನೀಡಲಾಯಿತು.