ನವದೆಹಲಿ: ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ 8 ತಿಂಗಳ ಕಾಲ ಭಾರತದಲ್ಲಿ ನಡೆಯಲಿರುವ ಯುವ 20 ಶೃಂಗದ ವೆಬ್‌ಸೈಟ್ ಮತ್ತು ಲಾಂಛನವನ್ನು ಶುಕ್ರವಾರ ಅನಾವರಣಗೊಳಿಸಿದರು.
ಜಿ-20 ಯ ಯುವ ಭಾಗಿದಾರರ ಅಧಿಕೃತ ವಿಭಾಗ ಇದಾಗಿದ್ದು, ಇಂದು ನಡೆದ ಯುವ 20 ಶೃಂಗದ ಪೂರ್ವಭಾವಿ ಸಮಾರಂಭದಲ್ಲಿ ಠಾಕೂರ್ ಲಾಂಛನ ಅನಾವರಣಗೊಳಿಸಿದರು.
ಈ ವೇದಿಕೆ ಜಿ 20 ಆದ್ಯತೆಗಳಲ್ಲಿ ಯುವಕರಿಗೆ ತಮ್ಮ ದೃಷ್ಟಿಕೋನ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಿದೆ.
ಯುವ ಸಾಧಕರ ಸಮೂಹ ಚರ್ಚೆಗಳು ನಡೆಯಲಿವೆ. ಯುವ ಸಮೂಹ ಹೇಗೆ ಭಾರತವನ್ನು ಮುನ್ನಡೆಸಲಿದೆ ಎಂಬ ಕುರಿತು ಸಾಧಕರು ಮಾತನಾಡಲಿದ್ದಾರೆ.
ಭಾರತ ಮೊದಲ ಸಲ ಯುವ 20 ಶೃಂಗ ಆಯೋಜಿಸುತ್ತಿದೆ. ಯುವಕರನ್ನು ಆಕರ್ಷಿಸುವ ಕಾರ್ಯಕ್ರಮದಲ್ಲಿ ಜಾಗತಿಕ ಮಟ್ಟದ ಎಲ್ಲ ಯುವ ಸಾಧಕರನ್ನು ಒಟ್ಟಿಗೆ ಕರೆತರುವ ಉದ್ದೇಶ ಹೊಂದಿದೆ. ಉತ್ತಮ ಜಾಗತಿಕ ಭವಿಷ್ಯದ ನಿಟ್ಟಿನಲ್ಲಿ ಚರ್ಚೆಗಳು ನಡೆಯಲಿವೆ. ಮುಂದಿನ 8 ತಿಂಗಳ ಕಾಲ ಯುವ 20 ಶೃಂಗದ ಸಭೆಗಳು ನಡೆಯಲಿದ್ದು, ದೇಶದ ಹಲವೆಡೆ ಚರ್ಚೆ, ಸೆಮಿನಾರ್‌ಗಳನ್ನು ಆಯೋಜಿಸಲಾಗಿದೆ.