ನವದೆಹಲಿ : 2021ಕ್ಕೆ ನಿಗದಿಯಾಗಿದ್ದ ಜನಗಣತಿ ಕಾರ್ಯವು (Census) ಮತ್ತಷ್ಟು ವಿಳಂಬಗೊಳ್ಳುವ ಸಾಧ್ಯತೆ ಇದ್ದು, ಮುಂದಿನ ಅದೇಶದವರೆಗೆ 2024-25ಕ್ಕೆ ಮುಂದೂಡಲಾಗಿದೆ. ಈ ಕುರಿತು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳೆದ ತಿಂಗಳು ಪತ್ರ ರವಾನೆಯಾಗಿದ್ದು, ಭಾರತೀಯ ಮಹಾ ನೋಂದಣಾಧಿಕಾರಿ ಕಚೇರಿಯು ಆಡಳಿತಾತ್ಮಕ ಗಡಿಯನ್ನು ಸ್ಥಗಿತಗೊಳಿಸಲು ನಿಗದಿಯಾಗಿದ್ದ ಜೂನ್ 30, 2023ರವರೆಗಿನ ಗಡುವನ್ನು ವಿಸ್ತರಿಸಿದೆ ಎಂದು indianexpress.com ವರದಿ ಮಾಡಿದೆ.
ಆಡಳಿತಾತ್ಮಕ ಗಡಿಗಳು ಸ್ಥಗಿತಗೊಂಡ ಕೆಲವು ತಿಂಗಳ ನಂತರ ಜನಗಣತಿ ಕಾರ್ಯ ಶುರುವಾಗಲಿದ್ದು ಮತ್ತು ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ 2023ರಲ್ಲಿ ಜನಗಣತಿ ನಡೆಯುವ ಸಾಧ್ಯತೆ ಇಲ್ಲವಾಗಿದೆ. ಅಲ್ಲದೆ, ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಇಲಾಖೆಯು ಮನೆಗಣತಿ ಕಾರ್ಯ ಕೈಗೊಳ್ಳುವ ಮುನ್ನ ಜನಗಣತಿ ಕಾರ್ಯ ನಡೆಯಲಿದೆ.
ಇದಕ್ಕೂ ಮುನ್ನ ಆಡಳಿತಾತ್ಮಕ ವ್ಯಾಪ್ತಿಯ ಬದಲಾವಣೆಗೆ ಡಿಸೆಂಬರ್ 31, 2022ರಿಂದ ಜೂನ್ 30, 2022ರ ನಡುವೆ ಗಡುವು ನಿಗದಿಪಡಿಸಲಾಗಿತ್ತು.
ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಸರ್ಕಾರವು ಜನಗಣತಿ ನಿಯಮಗಳಿಗೆ ಕೆಲವು ತಿದ್ದುಪಡಿ ಮಾಡಿ, ಸ್ವಯಂ ನಾಗರಿಕರೇ ರಾಷ್ಟ್ರೀಯ ಜನಸಂಖ್ಯೆ ನೋಂದಣಿಯಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಒದಗಿಸಿತ್ತು. ಈ ಬೆಳವಣಿಗೆಯಿಂದ ಮನೆಗಣತಿ ಕಾರ್ಯವು ಕಳೆದ ವರ್ಷವೇ ಶುರುವಾಗಬಹುದು ಎಂಬ ವದಂತಿ ಹಬ್ಬಿತ್ತು.
ರಾಷ್ಟ್ರೀಯ ಮಹಾ ನೋಂದಣಾಧಿಕಾರಿಗಳು ತಮ್ಮ ಪತ್ರದಲ್ಲಿ ಕೋವಿಡ್-19 ಸಾಂಕ್ರಾಮಿಕದ ಕಾರಣಕ್ಕೆ ಗಡುವು ವಿಸ್ತರಿಸಲಾಗಿದೆ ಎಂದು ಕಾರಣ ನೀಡಿದ್ದಾರೆ. 2020ರಿಂದ ಗಡುವು ವಿಸ್ತರಣೆಗೆ ಅದೇ ಕಾರಣ ನೀಡುತ್ತಾ ಬರಲಾಗಿದೆ. "ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸಾಂಕ್ರಾಮಿಕ ಹರಡುವ ಸಾಧ್ಯತೆ ಇರುವುದರಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ದೇಶಾದ್ಯಂತ ಕೋವಿಡ್-19 ಲಸಿಕೆ ಅಭಿಯಾನಕ್ಕೆ ವೇಗ ನೀಡಲು ಮುಂಚಿತವಾಗಿಯೇ ಸಿದ್ಧಗೊಂಡು, ಅದರಲ್ಲಿ ತೊಡಗಿಸಿಕೊಂಡಿರುವುದರಿಂದ ಈ ವರ್ಷ ಜನಗಣತಿ ಕಾರ್ಯವನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಅಲ್ಲದೆ ಜನಗಣತಿ ಕಾರ್ಯವನ್ನು ಕೈಗೊಳ್ಳಬೇಕಾದ ಕಾಲಾವಧಿಯನ್ನು ಇನ್ನೂ ನಿರ್ಧರಿಸಿಲ್ಲ" ಎಂದು ಕೊನೆಯ ಗಡುವು ವಿಸ್ತರಣೆ ಕುರಿತು ತನ್ನ ಪತ್ರದಲ್ಲಿ ತಿಳಿಸಿದೆ.
ಜನಗಣತಿ ನಿಯಮಗಳು, 1990ರ 8(vi) ನಿಯಮದ ಪ್ರಕಾರ, ಜನಗಣತಿ ಆಯುಕ್ತರು ಸೂಚಿಸಿದ ದಿನಾಂಕದಿಂದ ಆಡಳಿತಾತ್ಮಕ ಗಡಿಗಳು ಸ್ಥಗಿತಗೊಳ್ಳಲಿವೆ ಮತ್ತು ಸೂಚಿಸಿದ ದಿನಾಂಕದಿಂದ ಒಂದು ವರ್ಷಕ್ಕೂ ಮುನ್ನ ಆಡಳಿತಾತ್ಮಕ ಗಡಿಗಳನ್ನು ಸ್ಥಗಿತಗೊಳಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.