ನೋಯ್ಡಾ: 2022 ರಲ್ಲಿ ಪೆಟ್ರೋಲ್ ಜೊತೆ ಎಥೆನಾಲ್ ಮಿಶ್ರಣ ಶೇ.10.17 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಮ್ ಹಾಗೂ ನೈಸರ್ಗಿಕ ಅನಿಲಗಳ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಗ್ರೇಟರ್ ನೋಯ್ಡಾದಲ್ಲಿ ಆಟೋ ಎಕ್ಸ್ಪೋದಲ್ಲಿ ಎಥೆನಾಲ್ ಪೆವಿಲಿಯನ್ ಉದ್ಘಾಟಿಸಿ ಮಾತನಾಡಿದ ಹರ್ದೀಪ್ ಸಿಂಗ್ ಪುರಿ, 2013-14 ರಲ್ಲಿ ಶೇ. 1.53 ರಷ್ಟಿದ್ದ ಪೆಟ್ರೋಲ್ ನೊಂದಿಗಿನ ಎಥೆನಾಲ್ ಮಿಶ್ರಣವನ್ನು 2022 ರಲ್ಲಿ ಶೇ.10.17ಕ್ಕೆ ಏರಿಕೆ ಮಾಡಲಾಗಿದೆ. 2030 ರ ವೇಳೆಗೆ ಇದನ್ನು ಶೇ.20 ಕ್ಕೆ ಏರಿಕೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಎಥೆನಾಲ್ ಬ್ಲಂಡೆಡ್ ಇಂಧನದಿಂದಾಗಿ ಸರ್ಕಾರದ ಇಂಧನ ಭದ್ರತೆಯೂ ವೃದ್ಧಿಸುವುದಷ್ಟೇ ಅಲ್ಲದೇ, 41,500 ಕೋಟಿ ರೂಪಾಯಿ ವಿದೇಶಿ ವಿನಿಮಯ ಮೀಸಲು ಉಳಿತಾಯಕ್ಕೂ ಸಹಾಯವಾಗಿದೆ ಜೊತೆಗೆ 27 ಲಕ್ಷ ಎಂ.ಟಿಯಷ್ಟು ಜಿಹೆಚ್ ಜಿ ಎಮಿಷನ್ಸ್ ನ್ನು ಕಡಿಮೆ ಮಾಡುವುದಕ್ಕೆ, ರೈತರಿಗೆ 40,600 ಕೋಟಿ ರೂಪಾಯಿಗಳಷ್ಟು ಪಾವತಿ ಮಾಡುವುದಕ್ಕೆ ಸಹಕಾರಿಯಾಗಿದೆ ಎಂದು ಪುರಿ ವಿವರಿಸಿದ್ದಾರೆ.
ಮಾರುತಿ ಸುಜೂಕಿ, ಟೊಯಾಟ ಕಿರ್ಲೋಸ್ಕರ್ ಮೋಟಾರ್, ಟಿವಿಎಸ್, ಹಿರೋ ಮೋಟೋಕಾರ್ಪ್, ಬಜಾಜ್ ಆಟೋ, ಹೋಂಡ ಮೋಟರ್ ಸೈಕಲ್, ಯಮಹ, ಸುಜೂಕಿ ಮೋಟರ್ ಸೈಕಲ್ ಸಂಸ್ಥೆಗಳು ಫ್ಲೆಕ್ಸ್-ಇಂಧನ ವಾಹನಗಳ ಮಾದರಿಯನ್ನು ಪ್ರದರ್ಶಿಸಿದ್ದು, ಈ ವಾಹನಗಳು ಶೇ.20-85 ರಷ್ಟು ಎಥೆನಾಲ್ ಇಂಧನ ಮಿಶ್ರಣದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿವೆ.
ಇದೇ ಕಾರ್ಯಕ್ರಮದಲ್ಲಿ ಶುದ್ಧ ಇಂಧನ ಪಾಲುದಾರಿಕೆಗಾಗಿ ಅಮೇರಿಕಾ ಗ್ರೇನ್ಸ್ ಕೌನ್ಸಿಲ್ ಮತ್ತು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ನಡುವೆ ಒಪ್ಪಂದಕ್ಕೂ ಸಹಿ ಹಾಕಲಾಯಿತು.