ಮುಂಬೈ: ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಪ್ಲಾಟ್‌ಫಾರಂ ಮೂಲಕ ನಡೆಯುವ ವಹಿವಾಟು 2022ರ ಡಿಸೆಂಬರ್‌ನಲ್ಲಿ ದಾಖಲೆ ಮಟ್ಟ ತಲಿಪಿದ್ದು, 782 ಕೋಟಿ ವಹಿವಾಟು ಈ ಅವಧಿಯಲ್ಲಿ ಆಗಿದೆ. ಡಿಸೆಂಬರ್ ತಿಂಗಳಲ್ಲಿ ಆಗಿರುವ ಯುಪಿಐ ವಹಿವಾಟಿನ ಒಟ್ಟು ಮೊತ್ತ 12.8 ಲಕ್ಷ ಕೋಟಿ ರೂಪಾಯಿ!
ವಹಿವಾಟು ಸಂಖ್ಯೆಯಲ್ಲಿ ನವೆಂಬರ್ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಶೇಕಡ 7ರಷ್ಟು ವಹಿವಾಟು ಏರಿಕೆಯಾಗಿದೆ. ಅಂತೆಯೇ ಮೌಲ್ಯದ ಆಧಾರದಲ್ಲಿ ವಹಿವಾಟು ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇಕಡ ಎಂಟರಷ್ಟು ಅಧಿಕವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ವಹಿವಾಟು ಸಂಖ್ಯೆ ಮತ್ತು ಮೌಲ್ಯ ಕ್ರಮವಾಗಿ ಶೇಕಡ 71 ಹಾಗೂ 55ರಷ್ಟು ಹೆಚ್ಚಳವಾಗಿದೆ.
ಡಿಸೆಂಬರ್ ತಿಂಗಳಿನಲ್ಲಿ ಯುಪಿಐ ವಹಿವಾಟು ಅಕ್ಟೋಬರ್‌ನಲ್ಲಿ ಆದ ದಾಖಲೆ ಮಟ್ಟದ ವಹಿವಾಟು ಅಂದರೆ 700 ಕೋಟಿಯನ್ನು ದಾಟಿದೆ. ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಯುಪಿಐ ವಹಿವಾಟು 700 ಕೋಟಿ ತಲುಪಿ, 12 ಲಕ್ಷಕ್ಕೂ ಮೌಲ್ಯದ ವಹಿವಾಟು ದಾಖಲಾಗಿತ್ತು. ಅಕ್ಟೋಬರ್‌ನಲ್ಲಿ ನವರಾತ್ರಿ ಹಾಗೂ ದೀಪಾವಳಿ ಕಾರಣದಿಂದ ಹಲವು ಆನ್‌ಲೈನ್ ಚಿಲ್ಲರೆ ವಹಿವಾಟುದಾರರು ಆಫರ್‌ಗಳನ್ನು ಘೋಷಿಸಿದ ಹಿನ್ನೆಲೆಯಲ್ಲಿ ವಹಿವಾಟು ಸಂಖ್ಯೆ ಗಣನೀಯವಾಗಿ ಹೆಚ್ಚಿತ್ತು.
2022ರಲ್ಲಿ ಒಟ್ಟಾರೆಯಾಗಿ 7404 ಕೋಟಿ ಯುಪಿಐ ವಹಿವಾಟುಗಳು ನಡೆದಿದ್ದು, ಒಟ್ಟು ಮೌಲ್ಯ 125 ಲಕ್ಷ ಕೋಟಿ ರೂಪಾಯಿ.