ನವದೆಹಲಿ : 2022ರಲ್ಲಿ ದೆಹಲಿಯು ಭಾರತದ ಅತ್ಯಂತ ಕಲುಷಿತ ನಗರವಾಗಿತ್ತು. ಪಿ.ಎಂ. 2.5 ಗಾತ್ರದ ದೂಳಿನ ಕಣಗಳು ಹೆಚ್ಚಿರುವ ನಗರಗಳ ಪಟ್ಟಿಯಲ್ಲಿ ದೆಹಲಿಯು ಮೊದಲ ಸ್ಥಾನದಲ್ಲಿದ್ದರೆ, ಪಿ.ಎಂ. 10 ಗಾತ್ರದ ದೂಳಿನ ಕಣಗಳು ಹೆಚ್ಚು ಇರುವ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ದತ್ತಾಂಶಗಳನ್ನು ವಿಶ್ಲೇಷಿಸಿ ಈ ಪಟ್ಟಿ ಬಿಡುಗಡೆ ಮಾಡಿದೆ. ದೆಹಲಿಯ ವಾತಾವರಣದಲ್ಲಿ ಪಿ.ಎಂ. 2.5 ಗಾತ್ರದ ದೂಳಿನ ಕಣಗಳ ಪ್ರಮಾಣವನ್ನು ಕಳೆದ ನಾಲ್ಕು ವರ್ಷಗಳಲ್ಲಿ ಶೇ 7ರಷ್ಟು ಕಡಿತಗೊಳಿಸಿದೆ ಎಂದು ರಾಷ್ಟ್ರೀಯ ಸ್ವಚ್ಛ ಗಾಳಿ ಕಾರ್ಯಕ್ರಮದ (ಎನ್‌ಸಿಎಪಿ) ನಿಗಾ ವರದಿಯು ಹೇಳಿದೆ. ಆದರೆ, 2024ರ ಹೊತ್ತಿಗೆ ಶೇ 30ರಿಂದ ಶೇ 40ರಷ್ಟು ಕಡಿತ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು.
ಪಿ.ಎಂ. 2.5 ದೂಳಿನ ಕಣಗಳು ಹೆಚ್ಚು ಇರುವ ನಗರಗಳಲ್ಲಿ ಎರಡನೇ ಸ್ಥಾನದಲ್ಲಿ ಹರಿಯಾಣದ ಫರೀದಾಬಾದ್ ಹಾಗೂ ಮೂರನೇ ಸ್ಥಾನದಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ ಇದೆ. ಪಿ.ಎಂ. 10 ದೂಳಿನ ಕಣಗಳು ಹೆಚ್ಚು ಇರುವ ನಗರಗಳಲ್ಲಿ ಗಾಜಿಯಾಬಾದ್ ಮೊದಲ ಸ್ಥಾನದಲ್ಲಿದೆ. ಫರೀದಾಬಾದ್ ಹಾಗೂ ದೆಹಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.