ನವದೆಹಲಿ: 2022 ರ ಬಜೆಟ್ ನಲ್ಲಿ ಸರ್ಕಾರ ಎಲ್ಲಾ ರೀತಿಯ ಕ್ರಿಪ್ಟೋ ವಹಿವಾಟುಗಳಿಗೆ ಶೇ.30 ರಷ್ಟು ತೆರಿಗೆ ಹಾಗೂ ಶೇ.1 ರಷ್ಟು ಟಿಡಿಎಸ್ ನ್ನು ವಿಧಿಸಿತ್ತು. ಕಳೆದ ವರ್ಷದಿಂದ ಕ್ರಿಪ್ಟೋ ವಿನಿಮಯಗಳು ಸರ್ಕಾರವನ್ನು ತೆರಿಗೆಗೆ ಸಂಬಂಧಿಸಿದಂತೆ ಸ್ಪಷ್ಟತೆಯನ್ನು ಕೇಳುತ್ತಿದ್ದು, ಈ ವರ್ಷದ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟಿಡಿಎಸ್ ಕಡಿಮೆ ಮಾಡಿ ಕ್ರಿಪ್ಟೋ ಕ್ಷೇತ್ರಕ್ಕೆ ಸಂಬಂಧಿಸಿದ ಅಸ್ಥಿರತೆಯನ್ನು ಕಡಿಮೆ ಮಾಡುವ ನೀತಿಗಳನ್ನು ಘೋಷಿಸುತ್ತಾರೆ ಎಂಬ ನಿರೀಕ್ಷೆ ಇದೆ.
ಭಾರತದಲ್ಲಿ ಕ್ರಿಪ್ಟೋ ಕ್ಷೇತ್ರ ಕ್ಷಿಪ್ರ ಬೆಳವಣಿಗೆ ದಾಖಲಿಸಿದ್ದು, ಎಫ್ ಟಿಎಕ್ಸ್ ಹಾಗೂ ಸೆಲ್ಶಿಯಸ್ ವಿನಿಮಯಗಳು ಕುಸಿತ ಕಂಡಿದ್ದು ಹಾಗೂ ಲೂನಾದ ವೈಫಲ್ಯ ಬಳಕೆದಾರರ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡಿದೆ. ಅಷ್ಟೇ ಅಲ್ಲದೇ ಆರ್ ಬಿಐ ನ ಗೌರ್ನರ್ ಶಕ್ತಿಕಾಂತ್ ದಾಸ್ ಕ್ರಿಪ್ಟೋ ವಿರುದ್ಧ ಬಲವಾದ ನಿಲುವು ಹೊಂದಿದ್ದು ಕ್ರಿಪ್ಟೋ ಕರೆನ್ಸಿಯನ್ನು ಅಕ್ರಮ ಹಣ ವರ್ಗಾವಣೆಗೆ ಬಳಕೆ ಮಾಡಬಹುದು ಎಂಬ ಆತಂಕ ಹೊರಹಾಕಿದ್ದಾರೆ.
ಝೆಬ್ ಪೇ ನ ಸಿಇಒ ರಾಹುಲ್ ಪಗಿದಿಪತಿ ಈ ಬಗ್ಗೆ ಮಾತನಾಡಿದ್ದು, ವಿಡಿಎ ಗಳನ್ನು ನಿಯಂತ್ರಿಸುವತ್ತ ಕ್ರಮ ಕೈಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ 2023 ರ ಬಜೆಟ್ ನಲ್ಲಿ ಸರ್ಕಾರ ಪ್ರಗತಿಶೀಲ ನಿಯಂತ್ರಕ ಚೌಕಟ್ಟು ಮತ್ತು ಟಿಡಿಎಸ್ ಮತ್ತು ಕ್ಯಾಪಿಟಲ್ ಗೇನ್ಸ್ ತೆರಿಗೆಗಳನ್ನು ಕಡಿಮೆ ಮಾಡುವುದು ಮತ್ತು ಸ್ಟಾಕ್‌ಗಳು ಮತ್ತು ಬಾಂಡ್‌ಗಳಂತಹ ಇತರ ಆಸ್ತಿ ವರ್ಗಗಳೊಂದಿಗೆ ಸಮಗೊಳಿಸುವ ಮೂಲಕ ಕ್ರಿಪ್ಟೋ ತೆರಿಗೆಯ ಮೇಲೆ ಸ್ಪಷ್ಟತೆಯನ್ನು ನೀಡಲು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.
ಸರ್ಕಾರ ಮೇಲಿನ ಕ್ರಮಗಳನ್ನು ಕೈಗೊಂಡರೆ ಅಸ್ಥಿರತೆಗೆ ಉತ್ತರ ಸಿಗಲಿದ್ದು, ಎಫ್ ಟಿಎಕ್ಸ್ ಕುಸಿತದಂತಹ ಘಟನೆಗಳಿಂದ ಗ್ರಾಹಕರು ರಕ್ಷಣೆ ಪಡೆಯುವುದಕ್ಕೆ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.