ಹೊಸ ವರ್ಷವನ್ನು ಎಲ್ಲರೂ ಸಂಭ್ರಮ, ಹೊಸ ಗುರಿ, ಆಲೋಚನೆ, ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಗುರಿಯ ಮೂಲಕ ಸ್ವಾಗತಿಸಿದ್ದೇವೆ. ಈ ವರ್ಷದಲ್ಲಿ ಏನೆಲ್ಲಾ ವಿಶೇಷತೆಗಳಿರಲಿದೆ ಎಂಬ ಕುತೂಹಲ ನಿಮಗೆ ಇದ್ದೆ ಇರುತ್ತದೆ. ಅಲ್ಲದೆ ಯಾವುದೆ ಶುಭ ಕೆಲಸ ಮಾಡುವ ಮುನ್ನ ಶುಭ ದಿ ನೋಡುವುದು ವಾಡಿಕೆ ಹಾಗೆಯೇ ಗ್ರಹಣಗಳ ದಿನ ಮಾಡದೆ ಇರುವುದು ಹಿಂದೂ ಪದ್ದತಿ.
ಈ ನಿಟ್ಟಿನಲ್ಲಿ ನಾವಿಂದು 2023ರಲ್ಲಿ ಯಾವ ದಿನ ಗ್ರಹಣಗಳಿದೆ, ಎಷ್ಟು ಗ್ರಹಣಗಳಿದೆ ಮುಂದೆ ನೋಡೋಣ:
ಈ ವರ್ಷ ಸಂಭವಿಸಲಿರುವ ಸೂರ್ಯ ಮತ್ತು ಚಂದ್ರ ಗ್ರಹಣಗಳ ಪಟ್ಟಿ ಇಲ್ಲಿದೆ.
ಸೂರ್ಯಗ್ರಹಣ ಎಂದರೇನು?
ಸೂರ್ಯಗ್ರಹಣವು ಒಂದು ನೈಸರ್ಗಿಕ ವಿದ್ಯಮಾನವಾಗಿದ್ದು, ಚಂದ್ರನು ತನ್ನ ಕಕ್ಷೆಯ ಚಲನೆಯ ವೇಳೆ ಸೂರ್ಯ ಮತ್ತು ಭೂಮಿಯ ನಡುವೆ ಪ್ರವೇಶಿಸಿದಾಗ ಸಂಭವಿಸುತ್ತದೆ. ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಪ್ರವೇಶಿಸಿದಾಗ ಸೂರ್ಯನ ಕಿರಣಗಳು ಕೆಲವು ಸಮಯ ಭೂಮಿಗೆ ಬರದಂತೆ ತಡೆಯುತ್ತದೆ. ಈ ಸಂದರ್ಭದಲ್ಲಿ, ಚಂದ್ರನ ನೆರಳು ಮಾತ್ರ ಭೂಮಿಯ ಮೇಲೆ ಬೀಳುತ್ತದೆ ಇದನ್ನು ಸೂರ್ಯ ಗ್ರಹಣ ಎನ್ನಲಾಗುತ್ತದೆ. ಸೂರ್ಯಗ್ರಹಣವು ಪೂರ್ಣ ಸೂರ್ಯಗ್ರಹಣ, ಭಾಗಶಃ ಗ್ರಹಣ ಮತ್ತು ಉಂಗುರ ಗ್ರಹಣ ರೂಪದಲ್ಲಿ ಸಂಭವಿಸುತ್ತದೆ.
ಚಂದ್ರಗ್ರಹಣ ಎಂದರೇನು?
ಗ್ರಹಣ ಎನ್ನುವುದು ಖಗೋಳದಲ್ಲಿ ಸಂಭವಿಸುವ ವಿದ್ಯಮಾನ. ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಆಗ ಸಹಜವಾಗಿಯೇ ಚಂದ್ರ ಗೋಚರಿಸುವುದಿಲ್ಲ. ಈ ವಿದ್ಯಮಾನವನ್ನೇ ಚಂದ್ರ ಗ್ರಹಣ ಎನ್ನುತ್ತಾರೆ.
ಏಪ್ರಿಲ್ 20 ಮೊದಲ ಸೂರ್ಯಗ್ರಹಣ
ಮೊದಲ ಸೂರ್ಯಗ್ರಹಣ 2023 ಏಪ್ರಿಲ್ 20ರಂದು ಗುರುವಾರ ಸಂಭವಿಸುತ್ತದೆ. ಸೂರ್ಯ ಗ್ರಹಣವು ಭಾರತೀಯ ಕಾಲಮಾನ ಬೆಳಿಗ್ಗೆ 7:04ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12:29 ರವರೆಗೆ ಮುಂದುವರಿಯುತ್ತದೆ. ಆದರೆ ಭಾರತದಲ್ಲಿ ಈ ಸೂರ್ಯ ಗ್ರಹಣ ಗೋಚರಿಸುವುದಿಲ್ಲ ಎಂದು ಹೇಳಲಾಗಿದೆ.
ಅಕ್ಟೋಬರ್ 14 ಎರಡನೇ ಸೂರ್ಯಗ್ರಹಣ
ಎರಡನೇ ಸೂರ್ಯಗ್ರಹಣವು ಅಕ್ಟೋಬರ್ 14, 2023 ರಂದು ಶನಿವಾರ ಸಂಭವಿಸುತ್ತದೆ. ವರದಿಗಳ ಪ್ರಕಾರ ಈ ಗ್ರಹಣವು ಪಶ್ಚಿಮ ಆಫ್ರಿಕಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಅಟ್ಲಾಂಟಿಕಾ ಮತ್ತು ಆರ್ಕ್ಟಿಕ್‌ನಲ್ಲಿ ಗೋಚರಿಸುತ್ತದೆ.
ಮೇ 5 ಮೊದಲ ಚಂದ್ರಗ್ರಹಣ
2023ರಲ್ಲಿ ಮೊದಲ ಚಂದ್ರಗ್ರಹಣವು ಮೇ 5ರಂದು ಶುಕ್ರವಾರ ಸಂಭವಿಸುತ್ತದೆ, ಇದು ಮೊದಲ ಸೂರ್ಯಗ್ರಹಣದ ನಂತರ 15 ದಿನಗಳಾದ ನಂತರ ಸಂಭವಿಸುತ್ತದೆ. ಭಾರತೀಯ ಕಾಲಮಾನ ರಾತ್ರಿ 8.45ಕ್ಕೆ ಗ್ರಹಣ ಆರಂಭವಾಗಲಿದ್ದು, ಮಧ್ಯರಾತ್ರಿ 1 ಗಂಟೆಗೆ ಮುಕ್ತಾಯವಾಗುತ್ತದೆ. ಚಂದ್ರಗ್ರಹಣದ ಸೂತಕ ಅವಧಿಯು 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ.
ಅಕ್ಟೋಬರ್ 29 ನಾಲ್ಕನೇ ಎರಡನೇ ಚಂದ್ರಗ್ರಹಣ
ವರ್ಷದ ಕೊನೆಯ ಗ್ರಹಣವು ಅಕ್ಟೋಬರ್ 29, 2023 ರಂದು ಭಾನುವಾರ ಸಂಭವಿಸುತ್ತದೆ. ಈ ಚಂದ್ರಗ್ರಹಣವು ಭಾರತೀಯ ಕಾಲಮಾನ ತಡರಾತ್ರಿ1:06ಕ್ಕೆ ಪ್ರಾರಂಭವಾಗುತ್ತದೆ ಮತ್ತು 2:22ಕ್ಕೆ ಕೊನೆಗೊಳ್ಳುತ್ತದೆ. ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ ಎನ್ನಲಾಗಿದೆ.