ನವದೆಹಲಿ : 2040ರ ವೇಳೆಗೆ ಜಾಗತಿಕ ಇಂಧನ ಬೇಡಿಕೆಯಲ್ಲಿ ಭಾರತದ ಪಾಲು ಶೇ.25ರಷ್ಟಿರಲಿದೆ ಮತ್ತು 2025ರ ವೇಳೆಗೆ ಪೆಟ್ರೋಲ್‌ನಲ್ಲಿ ಶೇ.20ರಷ್ಟು ಈಥೆನಾಲ್ ಮಿಶ್ರಣವನ್ನು ಸಾಧಿಸಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮಂಗಳವಾರ ಹೇಳಿದರು.
2013-14ರಲ್ಲಿ ಪೆಟ್ರೋಲ್‌ನಲ್ಲಿ ಶೇ.1.53ರಷ್ಟಿದ್ದ ಈಥೆನಾಲ್ ಮಿಶ್ರಣ ಪ್ರಮಾಣವನ್ನು 2022ರಲ್ಲಿ ಶೇ.10.17ಕ್ಕೆ ಹೆಚ್ಚಿಸಿರುವುದಕ್ಕೆ ಒತ್ತು ನೀಡಿದ ಅವರು,2030ರಲ್ಲಿ ಶೇ.20ರಷ್ಟು ಈಥೆನಾಲ್ ಮಿಶ್ರಣವನ್ನು ಸಾಧಿಸುವ ತನ್ನ ಗುರಿಯನ್ನು ಸರಕಾರವು 2025-26ಕ್ಕೆ ಪರಿಷ್ಕರಿಸಿದೆ ಎಂದು ತಿಳಿಸಿದರು.
2006-07ರಲ್ಲಿ 27 ದೇಶಗಳು ಭಾರತಕ್ಕೆ ಕಚ್ಚಾತೈಲವನ್ನು ಪೂರೈಸುತ್ತಿದ್ದವು,ಸರಕಾರವು 2021-22ರಲ್ಲಿ ಅವುಗಳ ಸಂಖ್ಯೆಯನ್ನು 39ಕ್ಕೆ ಹೆಚ್ಚಿಸಿದೆ. ಕೊಲಂಬಿಯಾ,ರಶ್ಯಾ,ಲಿಬಿಯಾ, ಗಬನ್ ಮತ್ತು ಇಕ್ವೆಟೋರಿಯಲ್ ಗಿನಿಯಂತಹ ದೇಶಗಳು ಕಚ್ಚಾತೈಲ ಪೂರೈಕೆಯ ಹೊಸ ದೇಶಗಳಾಗಿವೆ ಎಂದು ಹೇಳಿದ ಪುರಿ,ಇದೇ ವೇಳೆ ಭಾರತವು ಅಮೆರಿಕ ಮತ್ತು ರಶ್ಯಾದಂತಹ ದೇಶಗಳೊಂದಿಗೆ ತನ್ನ ಸಂಬಂಧವನ್ನು ಇನ್ನಷ್ಟು ಬಲಗೊಳಿಸಿಕೊಂಡಿದೆ ಎಂದು ಹೇಳಿದರು.
ಹರ್ಯಾಣದ ಪಾನಿಪತ್,ಪಂಜಾಬಿನ ಬಠಿಂಡಾ,ಒಡಿಶಾದ ಬರಗಡ,ಅಸ್ಸಾಮಿನ ನುಮಾಲಿಗಡ ಮತ್ತು ಕರ್ನಾಟಕದ ದಾವಣಗೆರೆಗಳಲ್ಲಿ 2ಜಿ ಈಥೆನಾಲ್ ಬಯೊರಿಫೈನರಿಗಳನ್ನು ಸರಕಾರವು ಸ್ಥಾಪಿಸಲಿದೆ ಎಂದರು.
ಇ20 ಇಂಧನದ ಕುರಿತು ಮಾಹಿತಿ ನೀಡಿದ ಅವರು,ಇ20 ಇಂಧನವು 2023,ಎ.1ರಿಂದ ಹಂತ ಹಂತವಾಗಿ ಬಿಡುಗಡೆಯಾಗಲಿದೆ. ಇ20 ಇಂಧನವು ಶೇ.20ರಷ್ಟು ಈಥೆನಾಲ್ ಮತ್ತು ಶೇ.80ರಷ್ಟು ಪಳೆಯುಳಿಕೆ ಆಧಾರಿತ ತೈಲದ ಮಿಶ್ರಣವಾಗಿದೆ. ಇ20 ಇಂಧನದ ಯೋಜಿತ ಬಿಡುಗಡೆಯು ಪಳೆಯುಳಿಕೆ ಆಧಾರಿತ ಇಂಧನಗಳ ಮೇಲಿನ ಅವಲಂಬನೆಯನ್ನು ಹಾಗು ವಾಹನಗಳಿಂದ ವಾಯುಮಾಲಿನ್ಯವನ್ನು ತಗ್ಗಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು.