ನವದೆಹಲಿ:ಹೂಳು ಸಂಗ್ರಹದಿಂದಾಗಿ 2050ರ ವೇಳೆಗೆ ಭಾರತದಲ್ಲಿಯ ಸುಮಾರು 3,700 ಜಲಾಶಯಗಳು ತಮ್ಮ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ.26ರಷ್ಟನ್ನು ಕಳೆದುಕೊಳ್ಳಲಿವೆ ಮತ್ತು ಇದು ಭವಿಷ್ಯದಲ್ಲಿ ನೀರಿನ ಭದ್ರತೆ,ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಯನ್ನು ದುರ್ಬಲಗೊಳಿಸಲಿದೆ ಎಂದು ವಿಶ್ವಸಂಸ್ಥೆಯ ನೂತನ ಅಧ್ಯಯನವೊಂದು ಎಚ್ಚರಿಕೆ ನೀಡಿದೆ.
50 ವರ್ಷಗಳಿಗೂ ಹಳೆಯದಾದ 141 ಬೃಹತ್ ಜಲಾಶಯಗಳ ಪೈಕಿ ಶೇ.25ರಷ್ಟು ಜಲಾಶಯಗಳು ತಮ್ಮ ಆರಂಭಿಕ ಸಂಗ್ರಹ ಸಾಮರ್ಥ್ಯದ ಕನಿಷ್ಠ ಶೇ.30ರಷ್ಟನ್ನು ಕಳೆದುಕೊಂಡಿವೆ ಎಂದು ಕೇಂದ್ರೀಯ ಜಲ ಆಯೋಗವು 2015ರಲ್ಲಿ ವರದಿ ಮಾಡಿತ್ತು.
ಸಂಗ್ರಹವಾಗಿರುವ ಹೂಳು ಈಗಾಗಲೇ ವಿಶ್ವಾದ್ಯಂತ ಸುಮಾರು 50,000 ಬೃಹತ್ ಜಲಾಶಯಗಳ ಒಟ್ಟು ಮೂಲ ಸಂಗ್ರಹ ಸಾಮರ್ಥ್ಯವನ್ನು ಅಂದಾಜು ಶೇ.13ರಿಂದ ಶೇ.19ರಷ್ಟು ಕುಂಠಿತಗೊಳಿಸಿದೆ.
150 ದೇಶಗಳಲ್ಲಿಯ 47,403 ಬೃಹತ್ ಜಲಾಶಯಗಳ 6,316 ಶತಕೋಟಿ ಘನ ಮೀಟರ್ ನೀರು ಸಂಗ್ರಹದ ಆರಂಭಿಕ ಸಾಮರ್ಥ್ಯವು 2050ರ ವೇಳೆಗೆ 4,665 ಶತಕೋಟಿ ಘನ ಮೀಟರ್‌ಗೆ ಕುಸಿಯಲಿದೆ,ತನ್ಮೂಲಕ ಶೇ.26ರಷ್ಟು ನೀರಿನ ಸಂಗ್ರಹ ಕಡಿಮೆಯಾಗಲಿದೆ ಎಂದು ವಿಶ್ವಸಂಸ್ಥೆಯ ಯುನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆನ್ ವಾಟರ್,ಎನ್ವಿರಾನ್ಮೆಂಟ್ ಆಯಂಡ್ ಹೆಲ್ತ್ (ಯುಎನ್‌ಯು-ಐಎನ್‌ಡಬ್ಲುಇಎಚ್)ನ ಅಧ್ಯಯನವು ತೋರಿಸಿದೆ.
ಸಂಗ್ರಹ ಸಾಮರ್ಥ್ಯದಲ್ಲಿ 1,651 ಶತಕೋಟಿ ಘನ ಮೀಟರ್ ಕುಸಿತವು ಹೆಚ್ಚುಕಡಿಮೆ ಭಾರತ,ಚೀನಾ,ಇಂಡೋನೇಶ್ಯಾ,ಫ್ರಾನ್ಸ್ ಮತ್ತು ಕೆನಡಾಗಳ ವಾರ್ಷಿಕ ನೀರಿನ ಬಳಕೆಗೆ ಸಮವಾಗಿದೆ.
ವಿಶ್ವದ ಅತ್ಯಂತ ಹೆಚ್ಚು ಅಣೆಕಟ್ಟುಗಳಿರುವ ಪ್ರದೇಶವಾಗಿರುವ ಏಶ್ಯಾ-ಪೆಸಿಫಿಕ್ ವಲಯವು 2022ರಲ್ಲಿ ತನ್ನ ಆರಂಭಿಕ ಜಲಸಂಗ್ರಹ ಸಾಮರ್ಥ್ಯವನ್ನು ಶೇ.13ರಷ್ಟು ಕಳೆದುಕೊಂಡಿದೆ ಎಂದು ಅಂದಾಜಿಸಲಾಗಿತ್ತು. 2050ರ ವೇಳೆಗೆ ಈ ನಷ್ಟದ ಪ್ರಮಾಣವು ಶೇ.23ಕ್ಕೆ ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ.
ಏಶ್ಯಾ-ಫೆಸಿಫಿಕ್ ಪ್ರದೇಶದಲ್ಲಿ ವಿಶ್ವದ ಶೇ.60ರಷ್ಟು ಜನಸಂಖ್ಯೆ ವಾಸವಾಗಿದ್ದು,ಸುಸ್ಥಿರ ನೀರು ಮತ್ತು ಆಹಾರ ಭದ್ರತೆಗಾಗಿ ಜಲಸಂಗ್ರಹವು ನಿರ್ಣಾಯಕವಾಗಿದೆ.