ಜಬಲ್‌ಪುರ: ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ 77 ವರ್ಷದ ವೈದ್ಯ ಡಾ.ಎಂ.ಸಿ.ದಾವರ್ ಅವರಿಗೆ ಭಾರತ ಸರಕಾರವು ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
74ನೇ ಗಣರಾಜ್ಯೋತ್ಸವದ ಅಂಗವಾಗಿ ಬುಧವಾರ ಸಂಜೆ ಪದ್ಮಶ್ರೀ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ಡಾ. ದಾವರ್ ಜನವರಿ 16, 1946 ರಂದು ಪಾಕಿಸ್ತಾನದ ಪಂಜಾಬ್‌ನಲ್ಲಿ ಜನಿಸಿದರು ಹಾಗೂ ದೇಶ ವಿಭಜನೆಯ ನಂತರ ಅವರು ಭಾರತಕ್ಕೆ ಸ್ಥಳಾಂತರಗೊಂಡರು. 1967 ರಲ್ಲಿ, ಅವರು ತಮ್ಮ MBBS ಅನ್ನು ಜಬಲ್ಪುರದಲ್ಲಿ ಪೂರ್ಣಗೊಳಿಸಿದರು.
ದಾವರ್ ಅವರು 1971 ರಲ್ಲಿ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಸುಮಾರು ಒಂದು ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಆ ನಂತರ ಅವರು 1972 ರಿಂದ ಜಬಲ್ಪುರದ ಜನರಿಗೆ ಬಹಳ ಕಡಿಮೆ ಶುಲ್ಕದಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಅವರು 2 ರೂ.ಗೆ ಜನರಿಗೆ ಚಿಕಿತ್ಸೆ ನೀಡಲು ಆರಂಭಿಸಿದರು ಹಾಗೂ ಪ್ರಸ್ತುತ ಅವರು ಕೇವಲ ರೂ. 20 ಶುಲ್ಕ ಪಡೆಯುತ್ತಿದ್ದಾರೆ.
"ಕಠಿಣ ಪರಿಶ್ರಮವು ಕೆಲವೊಮ್ಮೆ ತಡವಾದರೂ ಸಹ ಫಲ ನೀಡುತ್ತದೆ. ಜನರ ಆಶೀರ್ವಾದದಿಂದ ನನಗೆ ಈ ಪ್ರಶಸ್ತಿ ಲಭಿಸಿದೆ'' ಎಂದು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಡಾ.ದಾವರ್ ಅವರು ANI ಗೆ ತಿಳಿಸಿದರು.