ನವದೆಹಲಿ:ದೇಶದ 70 ಕೋಟಿ ಜನತೆ ಹೊಂದಿರುವ ಒಟ್ಟು ಸಂಪತ್ತಿಗಿಂತ ಅಧಿಕ ಸಂಪತ್ತು ದೇಶದ 21 ಮಂದಿ ಶತಕೋಟ್ಯಧಿಪತಿಗಳ ಕೈಯಲ್ಲಿ ಸೇರಿರುವ ಅಂಶವನ್ನು Oxfam India ವರದಿ ಬಹಿರಂಗಪಡಿಸಿದೆ. ದೇಶದಲ್ಲಿ ಸಾಂಕ್ರಾಮಿಕ ಆರಂಭವಾದ ಅವಧಿಯಿಂದ ಕಳೆದ ವರ್ಷದ ನವೆಂಬರ್ ಕೊನೆಯವರೆಗೆ ಭಾರತದ ಶತಕೋಟ್ಯಧಿಪತಿಗಳ ಸಂಪತ್ತಿನಲ್ಲಿ ಶೇಕಡ 121ರಷ್ಟು ಅಥವಾ ದಿನಕ್ಕೆ 3608 ಕೊಟಿ ರೂಪಾಯಿ ಹೆಚ್ಚಿದೆ ಎನ್ನುವುದನ್ನು ಅಧ್ಯಯನ ದೃಢಪಡಿಸಿದೆ.
ದೇಶದಲ್ಲಿ 2021ರಲ್ಲಿ ಒಟ್ಟು ಸಂಪತ್ತಿನ ಶೇಕಡ 62ರಷ್ಟು, ಕೇವಲ ಶೇಕಡ 5ರಷ್ಟು ಮಂದಿಯ ಕೈಯಲ್ಲಿ ಕ್ರೋಢೀಕರಣವಾಗಿದ್ದರೆ, ಕೆಳಹಂತದ ಶೇಕಡ 50ರಷ್ಟು ಮಂದಿಯಲ್ಲಿ ಕೇವಲ ಶೇಕಡ 3ರಷ್ಟು ಸಂಪತ್ತು ಇದೆ. "ಸರ್ವೈವಲ್ ಆಫ್ ದ ರಿಚ್ಚೆಸ್ಟ್: ದ ಇಂಡಿಯನ್ ಸ್ಟೋರಿ" ಎಂಬ ವರದಿಯಲ್ಲಿ ಈ ಉಲ್ಲೇಖ ಮಾಡಲಾಗಿದೆ.
ಈ ವರದಿಯನ್ನು ಸೋಮವಾರ ದಾವೋಸ್‍ನಲ್ಲಿ ನಡೆಯುವ ವಿಶ್ವ ಆರ್ಥಿಕ ವೇದಿಕೆಯ ಸಭೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ. ದೇಶದಲ್ಲಿ 2020ರಲ್ಲಿ ಇದ್ದ ಶತಕೋಟ್ಯಧಿಪತಿಗಳ ಸಂಖ್ಯೆ 102ರಿಂದ 166ಕ್ಕೇರಿದೆ.
"ದೇಶದ 100 ಮಂದಿ ಅತ್ಯಂತ ಶ್ರೀಮಂತರ ಒಟ್ಟು ಸಂಪತ್ತು 54.12 ಲಕ್ಷ ಕೋಟಿ ರೂಪಾಯಿಗಳು. ಈ ಮೊತ್ತದಿಂದ ಇಡೀ ದೇಶದ ಬಜೆಟ್‍ಗೆ 18 ತಿಂಗಳಿಗೆ ಅಗತ್ಯವಾದ ನೆರವು ನೀಡಬಹುದಾಗಿದೆ ಎಂದು ವರದಿ ಉಲ್ಲೇಖಿಸಿದೆ. ಈ ಶತಕೋಟ್ಯಧಿಪತಿಗಳಿಗೆ ಅವರ ಸಂಪತ್ತಿನ ಮೇಳೆ ಒಂದು ಬಾರಿ ಶೇಕಡ 2ರಷ್ಟು ತೆರಿಗೆ ವಿಧಿಸಿದರೆ, 40,423 ಕೋಟಿ ರೂಪಾಯಿ ಆದಾಯ ಗಳಿಸಬಹುದು ಇದು ದೇಶದಲ್ಲಿ ಅಪೌಷ್ಟಿಕ ಮಕ್ಕಳ ಪೌಷ್ಟಿಕ ಕಾರ್ಯಕ್ರಮಕ್ಕೆ ಮೂರು ವರ್ಷಗಳ ಕಾಲ ಕೊಡುಗೆ ನೀಡಬಲ್ಲದು" ಎಂದು ವರದಿ ವಿವರಿಸಿದೆ.