ಗೋಧ್ರಾ: 17 ಜನರ ಸಾವಿಗೆ ಕಾರಣವಾಗಿದ್ದ ಗೋಧ್ರೋತ್ತರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 22 ಆರೋಪಿಗಳನ್ನು ಖುಲಾಸೆಗೊಳಿಸಿ ಗುಜರಾತ್‌ನ ನ್ಯಾಯಾಲಯ ಆದೇಶ ಹೊರಡಿಸಿದೆ.
2002ರ ಗೋಧ್ರಾ ಹತ್ಯಾಕಾಂಡದ ನಂತರ ನಡೆದ ಕೋಮುಗಲಭೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ 17 ಮಂದಿ ಕೊಲೆ ಮಾಡಲಾಗಿತ್ತು.
ಬಳಿಕ ಸಾಕ್ಷ್ಯವನ್ನು ನಾಶಪಡಿಸಲು ದೇಹಗಳನ್ನು ಸುಡಲಾಗಿತ್ತು.
ಪ್ರಕರಣದಲ್ಲಿ ವಿಚಾರಣೆ ನಡೆಸಿರುವ ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಹಲೋಲ್ ಪಟ್ಟಣದ ನ್ಯಾಯಾಲಯವು, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 22 ಆರೋಪಿಗಳನ್ನು ದೋಷ ಮುಕ್ತಗೊಳಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ಷ ತ್ರಿವೇದಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಈ ಪೈಕಿ ಎಂಟು ಮಂದಿ ವಿಚಾರಣೆಯ ಅವಧಿಯಲ್ಲಿ ಮೃತಪಟ್ಟಿದ್ದರು.
2002ರಲ್ಲಿ ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ ವಿಧ್ವಂಸಕ ಕೃತ್ಯದಲ್ಲಿ 59 ಮಂದಿ ಮೃತಪಟ್ಟಿದ್ದರು. ಅವರಲ್ಲಿ ಹೆಚ್ಚಿನವರು ಅಯೋಧ್ಯೆಯಿಂದ ಮರಳುತ್ತಿದ್ದ ಕರಸೇವಕರಾಗಿದ್ದರು. ಈ ಘಟನೆ ಬಳಿಕ ರಾಜ್ಯದ ವಿವಿಧ ಭಾಗಗಳಲ್ಲಿ ಕೋಮು ಗಲಭೆ ಭುಗಿಲೆದ್ದಿತ್ತು.