ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಅಮೋಘ ಸಾಧನೆ ಮಾಡಿದ 11 ಮಕ್ಕಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ 2023ನೇ ಸಾಲಿನ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿಎಂಆರ್‌ಬಿಪಿ) ಪ್ರದಾನ ಮಾಡಲಿದ್ದಾರೆ.
ಮಂಗಳವಾರ ಪ್ರಧಾನಿ ನರೇಂದ್ರ ಮೋದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಪ್ರಶಸ್ತಿ ಪುರಸ್ಕೃತ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೇಂದ್ರಾಡಳಿತ ಪ್ರದೇಶದ ಮತ್ತು 11 ರಾಜ್ಯಗಳ 6 ಬಾಲಕರು, 5 ಬಾಲಕಿಯರು ಪ್ರಶಸ್ತಿಗೆ ಭಾಜನರಾಗಿದ್ದು, ಪುರಸ್ಕೃತರಿಗೆ ಪ್ರಮಾಣ ಪತ್ರ, ₹1 ಲಕ್ಷ ನಗದು ಮತ್ತು ಪದಕ ನೀಡಲಾಗುತ್ತದೆ.
ಈ ಪ್ರಶಸ್ತಿಯನ್ನು ಸಂಸ್ಕೃತಿ, ಶೌರ್ಯ, ಆವಿಷ್ಕಾರ, ಪಾಂಡಿತ್ಯ, ಸಮಾಜ ಸೇವೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮನ್ನಣೆಗೆ ಪಾತ್ರವಾದ 5 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೊಡಲಾಗುತ್ತದೆ.
ಈ ವರ್ಷ ಸಾಂಸ್ಕೃತಿಕ ವಿಭಾಗದಲ್ಲಿ ನಾಲ್ವರು, ಸಮಾಜ ಸೇವೆ ಮತ್ತು ಶೌರ್ಯಕ್ಕೆ ತಲಾ ಒಬ್ಬರು, ಆವಿಷ್ಕಾರದಲ್ಲಿ ಇಬ್ಬರು ಹಾಗೂ ಕ್ರೀಡೆಯಲ್ಲಿ ಮೂವರು ಮಕ್ಕಳು ಪುರಸ್ಕಾರ ಪಡೆದುಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.