ನವದೆಹಲಿ: ಸುಭಾಷ್ ಚಂದ್ರ ಬೋಸರು 1943 ರಲ್ಲಿ ಮೊದಲ ಬಾರಿಗೆ ರಾಷ್ಟ್ರಧ್ವಜವನ್ನು ಹಾರಿಸಿದ್ದ ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಜ.23 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ.
1943 ರ ಡಿ.30 ರಂದು ನೇತಾಜಿ ಸುಭಾಷ್ ಚಂದ್ರಬೋಸ್ ಅವರು ರಾಷ್ಟ್ರಧ್ವಜಾರೋಹಣವನ್ನು ಇಲ್ಲಿನ ಜಿಮ್ಖಾನಾ ಮೈದಾನದಲ್ಲಿ ನೆರವೇರಿಸಿದ್ದರು. ಇದೇ ಸ್ಥಳದಲ್ಲಿ ಜ.23 ರಂದು ಅಮಿತ್ ಶಾ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ಗೃಹ ಸಚಿವರು ಪೋರ್ಟ್ ಬ್ಲೇರ್ ನಿಂದ ಹತ್ತಿರದಲ್ಲೇ ಇರುವ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪಕ್ಕೂ ಭೇಟಿ ನೀಡಲಿದ್ದಾರೆ. ಈ ದ್ವೀಪವನ್ನು ಅಬರ್ಡೀನ್ ಜೆಟ್ಟಿಯಿಂದ ಬೋಟ್ ನಲ್ಲಿ 15-20 ನಿಮಿಷಗಳಲ್ಲಿ ತಲುಪಬಹುದಾಗಿದೆ.
2018 ರ ಡಿ.30 ರಂದು ರಾಸ್ ದ್ವೀಪವನ್ನು ಪ್ರಧಾನಿ ನರೇಂದ್ರ ಮೋದಿ ನೇತಾಜಿ ಸುಭಾಷ್ ಚಂದ್ರಬೋಸ್ ದ್ವೀಪ ಎಂದು ಮರುನಾಮಕರಣ ಮಾಡಿದ್ದರು. ಜಪಾನ್ ವಶದಲ್ಲಿದ್ದ ಅಂಡಮಾನ್ ನಿಕೋಬಾರ್ ದ್ವೀಪವನ್ನು 1943 ರ ಡಿ.29 ರಂದು ಜಪಾನ್ ನೇತಾಜಿ ಅವರ ಆಜಾದ್ ಹಿಂದ್ ಸರ್ಕಾರಕ್ಕೆ ಹಸ್ತಾಂತರಿಸಿತ್ತು.
ಅಮಿತ್ ಶಾ ಜ.23 ರಂದು ದ್ವೀಪದಲ್ಲಿ ನಡೆಯುತ್ತಿರುವ ಪರಿಸರ ಪ್ರವಾಸೋದ್ಯಮ ಸೇರಿದಂತೆ ಹಲವು ಅಭಿವೃದ್ದಿ ಕ್ರಮಗಳು ಹಾಗೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಲಿದ್ದಾರೆ.
ಅಮಿತ್ ಶಾ ಸೆಲ್ಯುಲರ್ ಜೈಲ್ ಗೆ ಭೇಟಿ ನೀಡಲಿದ್ದಾರೆ ಹಾಗೂ ಅಂಡಮಾನ್ ನಲ್ಲಿರುವ ಬಿಜೆಪಿ ನಾಯಕರನ್ನು ಭೇಟಿ ಮಾಡಲಿದ್ದಾರೆ.