ನವದೆಹಲಿ: 2002 ರ ಗೋಧ್ರಾ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಬಿಬಿಸಿ ತಯಾರಿಸಿರುವ ವಿವಾದಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಯೋಜನೆ ರೂಪಿಸಿದ ಆರೋಪದಡಿ ದೆಹಲಿ ಪೊಲೀಸರು ದೆಹಲಿ ವಿಶ್ವವಿದ್ಯಾಲಯದ ಕಲಾ ವಿಭಾಗದ 24 ವಿದ್ಯಾರ್ಥಿಗಳನ್ನು ಇಂದು (ಜ.27) ರಂದು ವಶಕ್ಕೆ ಪಡೆದಿದ್ದಾರೆ.
ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಜೆಎನ್ ಯು ಹಾಗೂ ಜಾಮೀಯಾ ಮಿಲಿಯಾ ಇಸ್ಲಾಮಿಯಾ ವಿವಿಗಳಲ್ಲಿ ವಿವಾದಿತ ಸಾಕ್ಷ್ಯಚಿತ್ರ ಪ್ರದರ್ಶನದ ವಿಷಯವಾಗಿ ಗಲಾಟೆ ಉಂಟಾಗಿತ್ತು. ಈ ಬೆನ್ನಲ್ಲೇ ದೆಹಲಿ ವಿವಿಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿರುವ ಬೆಳವಣಿಗೆ ನಡೆದಿದೆ.
ಉತ್ತರ ವಿಭಾಗದ ಉಪ ಆಯುಕ್ತ ಸಾಗರ್ ಸಿಂಗ್ ಕಲ್ಸಿ ಮಾತನಾಡಿ, ಸಂಜೆ 4 ಗಂಟೆ ವೇಳೆಗೆ 20 ಮಂದಿ ಕಲಾ ವಿಭಾಗದಿಂದ ಹೊರಬಂದು ನಿರ್ಬಂಧಿಸಿರುವ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಯತ್ನಿಸಿದರು. ಈ ನಡೆ ಶಾಂತಿ ಹಾಗೂ ಪ್ರಶಾಂತ ವಾತಾವರಣ ಕದಡುವ ಸಾಧ್ಯತೆ ಇರುವುದರಿಂದ ಅವರನ್ನು ಅಲ್ಲಿಂದ ತೆರಳುವಂತೆ ಹೇಳಲಾಯಿತು. ಆದರೆ ಅವರು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಶಾಂತಿಯುತವಾಗಿ ವಶಕ್ಕೆ ಪಡೆಯಲಾಯಿತು ಎಂದು ಹೇಳಿದ್ದಾರೆ. ಒಟ್ಟು 24 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.