ಗ್ರೇಟರ್ ನೋಯ್ಡಾ: ಕಟ್ಟಡ ನಿರ್ಮಾಣ ಸ್ಥಳದಲ್ಲಿ ತಾತ್ಕಾಲಿಕವಾಗಿ ಅಳವಡಿಸಿದ್ದ ಲಿಫ್ಟ್ ಅನ್ನು ಬೇರ್ಪಡಿಸುವ ಯತ್ನದಲ್ಲಿದ್ದಾಗ ಲಿಫ್ಟ್ 25ನೇ ಮಹಡಿಯಿಂದ ನೆಲಮಹಡಿಗೆ ಕುಸಿದು 28 ವರ್ಷ ವಯಸ್ಸಿನ ಸರ್ವೀಸ್ ಎಂಜಿನಿಯರ್ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಗಗನಚುಂಬಿ ಕಟ್ಟಡದ ನಿರ್ಮಾಣಕ್ಕಾಗಿ ಖಾಸಗಿ ಕಂಪನಿ ಲಿಫ್ಟ್ ಸೇವೆಯನ್ನು ಒದಗಿಸಿತ್ತು. ಕಾರ್ಯ ಪೂರ್ಣಗೊಂಡ ಬಳಿಕ ಲಿಫ್ಟ್ ಅನ್ನು ನಿರ್ಮಾಣ ಸ್ಥಳದಿಂದ ಬೇರ್ಪಡಿಸುವ ಸಲುವಾಗಿ ಸರ್ವೀಸ್ ಎಂಜಿನಿಯರ್‍ನನ್ನು ಕಳುಹಿಸಲಾಗಿತ್ತು. ಈ ಕಂಪನಿಯ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದಾಗಿ ಸಾವು) ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ರಿತಿಕ್ ರಾಥೋಡ್ ಎಂಬ ಫಿರೋಜಾಬಾದ್ ನಿವಾಸಿ ಲಿಫ್ಟ್‍ನಲ್ಲಿ ಸಂಜೆ 4.15ರ ಸುಮಾರಿಗೆ ಕೆಲಸ ಮಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಏಸ್‍ಪಾರ್ಕ್ ವ್ಯೂ ಸೊಸೈಟಿ ಕಟ್ಟಡ ನಿರ್ಮಾಣಕ್ಕೆ ಸ್ಪಾರ್ಟನ್ ಎಂಬ ಕಂಪನಿ ತಾತ್ಕಾಲಿಕ ಲಿಫ್ಟ್ ಸೇವೆಯನ್ನು ಒದಗಿಸಿತ್ತು. ಕಟ್ಟಡಕ್ಕೆ ಕಾಯಂ ಲಿಫ್ಟ್ ಸೇವೆ ಕಾರ್ಯಾರಂಭ ಮಾಡಿದ ಹಿನ್ನೆಲೆಯಲ್ಲಿ ಈ ಲಿಫ್ಟ್ ಅನ್ನು ವಾಪಾಸು ಒಯ್ಯಲು ಬಿಲ್ಟರ್ ಕಂಪನಿಗೆ ಸೂಚಿಸಿದ್ದರು ಎಂದು ಹೆಚ್ಚುವರಿ ಡಿಸಿಪಿ ದಿನೇಶ್ ಕುಮಾರ್ ಸಿಂಗ್ ಹೇಳಿದ್ದಾರೆ. ರಾಥೋಡ್ ಅವರು ಕೆಲಸ ಮಾಡುತ್ತಿದ್ದಾಗ ಲಿಫ್ಟ್ ಅನ್ನು ಹಿಡಿದಿಟ್ಟಿದ್ದ ಕಂಬಿಗಳು ಭಾರ ತಾಳಲಾರದೇ ಕುಸಿದಿರಬೇಕು ಎಂದು ಅವರು ಅಂದಾಜಿಸಿದ್ದಾರೆ.
ನಿರ್ಮಾಣ ಕಾರ್ಮಿಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣವೇ ರಾಥೋಡ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆ ವೇಳೆಗಾಗಲೇ ಅವರು ಮೃತಪಟ್ಟಿದ್ದನ್ನು ವೈದ್ಯರು ದೃಢಪಡಿಸಿದರು. ನಾಲೆಡ್ಜ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.