ನವದೆಹಲಿ: 'ಪ್ರಸಾರ ಭಾರತಿ'ಯ ಮೂಲಸೌಕರ್ಯದ ಸಂಪೂರ್ಣ ಉನ್ನತೀಕರಣಕ್ಕಾಗಿ 2025-26ನೇ ಸಾಲಿನವರೆಗೆ ₹2,539.61 ಕೋಟಿ ವ್ಯಯಿಸಲು ಆರ್ಥಿಕ ವ್ಯವಹಾರಗಳ ಸಂಸದೀಯ ಸಮಿತಿ (ಸಿಸಿಇಎ) ಬುಧವಾರ ಒಪ್ಪಿಗೆ ಸೂಚಿಸಿದೆ.
ಆಕಾಶವಾಣಿ (ಎಐಆರ್) ಮತ್ತು ದೂರದರ್ಶನದ ಪ್ರಸಾರ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು 'ಪ್ರಸಾರ ಮೂಲಸೌಕರ್ಯ ಮತ್ತು ಜಾಲ ಅಭಿವೃದ್ಧಿ' (ಬಿಐಎನ್‌ಡಿ) ಯೋಜನೆ ಪ್ರಸ್ತಾವನೆಯನ್ನು ಸಮಿತಿಗೆ ಸಲ್ಲಿಸಿದ್ದರು.
ಈ ಪ್ರಸ್ತಾವನೆ ಪರಿಶೀಲಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಭೆಯು ಬಿಐಎನ್‌ಡಿಗೆ ಒಪ್ಪಿಗೆ ನೀಡಿದೆ.
ಪ್ರಸಾರದ ಮೂಲಸೌಕರ್ಯ, ಕಾರ್ಯಕ್ರಮಗಳ ವಸ್ತು ಉನ್ನತೀಕರಣ ಮತ್ತು ಸಂಸ್ಥೆಗೆ ಸಂಬಂಧಿಸಿದ ಕೆಲಸಗಳಿಗಾಗಿ ಪ್ರಸಾರ ಭಾರತಿಗೆ ಧನ ಸಹಾಯ ನೀಡುವ ಯೋಜನೆ ಇದಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಯೋಜನೆ ಮೂಲಕ ಎಫ್‌ಎಂ ರೇಡಿಯೊ ಪ್ರಸಾರ ವ್ಯಾಪ್ತಿಯನ್ನು ಭೌಗೋಳಿಕ ಪ್ರದೇಶ ಮಟ್ಟದಲ್ಲಿ ಶೇ 59ರಿಂದ ಶೇ 66ಕ್ಕೆ ಹೆಚ್ಚಿಸುವ ಮತ್ತು ಜನಸಂಖ್ಯೆ ಮಟ್ಟದಲ್ಲಿ ಶೇ 68ರಿಂದ ಶೇ 80ಕ್ಕೆ ಹೆಚ್ಚಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ಜೊತೆಗೆ, ಅತಿ ದೂರದ ಪ್ರದೇಶಗಳು, ಬುಡಕಟ್ಟು ಜನಾಂಗಗಳು ವಾಸಿಸುವ ಪ್ರದೇಶಗಳು, ನಕ್ಸಲ್ ಹಾವಳಿಯಿಂದ ತತ್ತರಿಸಿರುವ ಪ್ರದೇಶಗಳು ಮತ್ತು ಗಡಿ ಪ್ರದೇಶಗಳಿಗೆ 8 ಲಕ್ಷ ಉಚಿತ ಸೆಟ್ ಟಾಪ್ ಬಾಕ್ಸ್‌ಗಳನ್ನು ವಿತರಿಸುವ ಉದ್ದೇಶವನ್ನೂ ಈ ಯೋಜನೆ ಹೊಂದಿದೆ.
ದೇಶದಲ್ಲಿಯ ಮತ್ತು ವಿದೇಶಿ ವೀಕ್ಷಕರನ್ನು ಗಮನದಲ್ಲಿರಿಸಿಕೊಂಡು ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವುದು, ನೇರವಾಗಿ ಮನೆಗೆ (ಡಿಟಿಎಚ್) ವೇದಿಕೆಯ ಸಾಮರ್ಥ್ಯದಲ್ಲಿ ಸುಧಾರಣೆ ತರುವ ಮೂಲಕ ಹೆಚ್ಚು ವಾಹಿನಿಗಳ ಪ್ರಸಾರ ಮಾಡುವ ಉದ್ದೇಶ, ಹೊರಾಂಗಣ ಚಿತ್ರೀಕರಣ ಮತ್ತು ನೇರ ಪ್ರಸಾರ ಸೌಲಭ್ಯವಿರುವ ವಾಹನಗಳ (ಒಬಿ ವ್ಯಾನ್) ಖರೀದಿ, ದೂರದರ್ಶನದ ಮತ್ತು ಎಐಆರ್ ಸ್ಟುಡಿಯೋಗಳ ಡಿಜಿಟಲ್ ಉನ್ನತೀಕರಣವು ಈ ಯೋಜನೆಯಲ್ಲಿ ಸೇರಿದೆ.
ಮುಂದಿನ 20 ವರ್ಷಗಳಲ್ಲಿ ದೂರದರ್ಶನವು ಹೇಗೆ ಅಭಿವೃದ್ಧಿಗೊಂಡಿರುತ್ತದೆ ಎಂಬುದರ ರೂಪುರೇಷೆಯನ್ನು ಈ ಯೋಜನೆ ಹೊಂದಿದೆ ಎಂದು ಅನುರಾಗ್ ಠಾಕೂರ್ ಅವರು ಹೇಳಿದ್ದಾರೆ.