ತ್ರಿಶ್ಶೂರ್: ಮಧ್ಯ ಕೇರಳದ ಪ್ರಸಿದ್ಧ ಗುರುವಾಯೂರ್ ದೇವಸ್ಥಾನದಲ್ಲಿ 263.637 ಕೆ.ಜಿ. ಚಿನ್ನದ ಸಂಗ್ರಹವಿದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಮೂಲಕ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ದೇವಾಲಯದ ಆಡಳಿತ ಮಂಡಳಿಯು, 'ಅಮೂಲ್ಯ ರತ್ನಗಳು, ಚಿನ್ನದ ನಾಣ್ಯಗಳು, 20 ಸಾವಿರ ಚಿನ್ನದ ಪದಕಗಳು ಸೇರಿ ಒಟ್ಟು 263.637 ಕೆ.ಜಿ.ಚಿನ್ನದ ಸಂಗ್ರಹವಿದೆ' ಎಂದು ಹೇಳಿದೆ.
5,359 ಬೆಳ್ಳಿಯ ಪದಕಗಳು ಸೇರಿ ದೇಗುಲದಲ್ಲಿ ಒಟ್ಟು 6,605 ಕೆ.ಜಿ. ಬೆಳ್ಳಿಯ ಸಂಗ್ರಹವಿದೆ ಎಂಬುದು ಆರ್‌ಟಿಐ ದಾಖಲೆಗಳಿಂದ ಬಹಿರಂಗಗೊಂಡಿದೆ.
ಸ್ಥಳೀಯ ನಿವಾಸಿ ಹಾಗೂ 'ಪ್ರಾಪರ್ ಚಾನೆಲ್' ಸಂಘಟನೆಯ ಅಧ್ಯಕ್ಷ ಎಂ.ಕೆ. ಹರಿದಾಸ್ ಎಂಬುವವರು ದೇಗುಲದ ಆಸ್ತಿಯ ಕುರಿತು ಆರ್‌ಟಿಐ ಮೂಲಕ ಮಾಹಿತಿ ಕೋರಿದ್ದರು.
ದೇವಾಲಯದ ಅಭಿವೃದ್ಧಿ ಮತ್ತು ಭಕ್ತರಿಗೆ ಸೌಲಭ್ಯ ಒದಗಿಸುವ ಕುರಿತು ಗುರುವಾಯೂರ್ ದೇವಸ್ವಂ (ದೇವಾಲಯದ ಆಡಳಿತ ಮಂಡಳಿ) ತೋರುತ್ತಿರುವ ನಿರ್ಲಕ್ಷ್ಯದ ಕಾರಣಕ್ಕೆ ಆರ್‌ಟಿಐ ಮೂಲಕ ಈ ಮಾಹಿತಿ ಕೇಳಿದ್ದೇನೆ ಎಂದು ಹರಿದಾಸ್ ತಿಳಿಸಿದ್ದಾರೆ.
ಭದ್ರತೆಯ ಕಾರಣವೊಡ್ಡಿ ಈ ಕುರಿತ ಮಾಹಿತಿಯನ್ನು ಬಹಿರಂಗಪಡಿಸಲು ದೇಗುಲದ ಆಡಳಿತ ಮಂಡಳಿಯು ಈ ಹಿಂದೆ ನಿರಾಕರಿಸಿತ್ತು.
ದೇವಾಲಯವು ₹1,737.04 ಕೋಟಿ ಬ್ಯಾಂಕ್ ಠೇವಣಿಯನ್ನು ಹಾಗೂ 271.05 ಎಕರೆ ಜಮೀನನ್ನು ಹೊಂದಿರುವುದು ಈ ಹಿಂದೆ ಆರ್‌ಟಿಐ ಮೂಲಕ ಪಡೆದ ಮಾಹಿತಿಯಿಂದ ಬಹಿರಂಗಗೊಂಡಿತ್ತು.