ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಚಾಲನೆ ನೀಡಿದರು.
ಇಂದು ಪ್ರಧಾನಿ ಮೋದಿ ಅವರು 26ನೇ ರಾಷ್ಟ್ರೀಯ ಯುವಜನೋತ್ಸವವನ್ನು ರಿಮೋರ್ಟ್ ಒತ್ತುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಇಂದು ಸ್ವಾಮಿ ವಿವೇಕಾನಂದರ ಜನ್ಮ ದಿನ. ವಿವೇಕಾನಂದರಿಂದ ಪ್ರೇರಣೆ ಪಡೆದು ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ದೇಶದಲ್ಲಿ ಶೇಕಡಾ 40ಕ್ಕೂ ಹೆಚ್ಚು ಯುವಕರು ಇರುವ ದೇಶ ನಮ್ಮದು. ಯುವ ಸಮೂಹಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ನೀಡುವ ಯೋಜನೆ ಜಾರಿ ಮಾಡಲಾಗಿದೆ ಎಂದು ಹೇಳಿದರು.
ಇಂದು ಮಧ್ಯಾಹ್ನ ವಾಯುಸೇನೆ ವಿಮಾನದಲ್ಲಿ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರು, ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗೆ ಸುಮಾರು ಒಂದು ಗಂಟೆಗಳ ಕಾಲ ರೋಡ್ ಶೋ ನಡೆಸಿದರು.