ನವದೆಹಲಿ: ಕೇಂದ್ರ ಸರ್ಕಾರದ ಆಡಳಿತದ ವೈಫಲ್ಯಗಳನ್ನು ವಿವರಿಸಿರುವ ಆರೋಪ ಪಟ್ಟಿ ಮತ್ತು ರಾಹುಲ್ ಗಾಂಧಿ ಬರೆದ ಪತ್ರವನ್ನು ಪ್ರತಿ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಜ.26 ರಿಂದ ಚಾಲನೆ ದೊರೆಯಲಿದೆ ಎಂದು ಕಾಂಗ್ರೆಸ್ ಪಕ್ಷ ಶುಕ್ರವಾರ ಹೇಳಿದೆ.
ಎರಡು ತಿಂಗಳ ಕಾಲ ನಡೆಯುವ 'ಹಾಥ್ ಸೆ ಹಾಥ್ ಜೋಡೊ' ಎಂಬ ಕಾರ್ಯಕ್ರಮದಲ್ಲಿ 2.5 ಲಕ್ಷ ಗ್ರಾಮ ಪಂಚಾಯಿತಿಗಳು, 6 ಲಕ್ಷ ಗ್ರಾಮಗಳು ಮತ್ತು 10 ಲಕ್ಷ ಬೂತ್‌ಗಳನ್ನು ತಲುಪುವ ಗುರಿಯಿದೆ. ತನ್ನ ರಾಜಕೀಯ ಸಂದೇಶವನ್ನು ಜನರಿಗೆ ತಲುಪಿಸಲು ಹಮ್ಮಿಕೊಂಡಿರುವ ಬೃಹತ್ ಕಾರ್ಯಕ್ರಮ ಇದಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಈ ಕಾರ್ಯಕ್ರಮವು ಕಾಂಗ್ರೆಸ್ ಪಕ್ಷದ ಧ್ಯೇಯ ಮತ್ತು ಭಾರತ್ ಜೋಡೊ ಯಾತ್ರೆಯ ರಾಜಕೀಯ ಸಂದೇಶವನ್ನು ಜನತೆಗೆ ತಲುಪಿಸಲಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ದೇಶದ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ, ಅಸಹನೀಯ ಬೆಲೆ ಏರಿಕೆ, ಕೃಷಿ ಕ್ಷೇತ್ರದಲ್ಲಿನ ತೀವ್ರ ಸಂಕಷ್ಟ ಮತ್ತು ದೇಶದ ಸಂಪತ್ತನ್ನು ಸಂಪೂರ್ಣವಾಗಿ ಕಾರ್ಪೊರೇಟ್ ಕಂಪನಿಗಳ ಕೈಗಿಡುತ್ತಿರುವ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಗಳ ಕುರಿತು ಈ ಪತ್ರದಲ್ಲಿ ರಾಹುಲ್ ಗಾಂಧಿ ವಿವರಿಸಿದ್ದಾರೆ.
'ಕೇಂದ್ರ ಸರ್ಕಾರದ ಆಡಳಿತ ವೈಖರಿಯಿಂದಾಗಿ ಜನರು ತಮ್ಮ ಉದ್ಯೋಗ ಕಳೆದುಕೊಳ್ಳುವ ಕುರಿತು ಚಿಂತಿತರಾಗಿದ್ದಾರೆ. ಆದಾಯ ಮತ್ತಷ್ಟು ಕುಸಿಯುತ್ತಿದೆ ಮತ್ತು ಉತ್ತಮ ಭವಿಷ್ಯದ ಅವರ ಕನಸುಗಳು ಛಿದ್ರವಾಗುತ್ತಿವೆ ಮತ್ತು ದೇಶದಾದ್ಯಂತ ಹತಾಶೆಯ ಆಳವಾದ ಭಾವ ಬೇರೂರುತ್ತಿದೆ. ಇದನ್ನೆಲ್ಲ ರಾಹುಲ್ ಗಾಂಧಿ ದೇಶದ ಜನತೆಗೆ ಮನವರಿಕೆ ಮಾಡಿಕೊಡುವ ಯತ್ನ ಮಾಡುತ್ತಿದ್ದಾರೆ' ಎಂದು ಜೈರಾಮ್ ರಮೇಶ್ ತಿಳಿಸಿದರು.
ಕೇಂದ್ರ ಸರ್ಕಾರ ಧರ್ಮ, ಸಮುದಾಯ, ಪ್ರದೇಶಗಳ ನಡುವೆ ದ್ವೇಷ ಬಿತ್ತುತ್ತಿದೆ. ವೈವಿಧ್ಯತೆಯನ್ನು ಹಾಳುಗೆಡವಲಾಗುತ್ತಿದೆ. ಇದನ್ನೆಲ್ಲ ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ದಿನ ಬೀದಿಯಿಂದ ಸಂಸತ್ತಿನವರೆಗೂ ಹೋರಾಡುತ್ತೇನೆ ಎಂದು ರಾಹುಲ್ ಪತ್ರದಲ್ಲಿ ಜನತೆಗೆ ಆಶ್ವಾಸನೆ ನೀಡಿದ್ದಾರೆ.