ಕಾಸರಗೋಡು: ವಿದ್ಯಾನಗರ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ 26ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಾಸರಗೋಡು ಲಲಿತ ಕಲಾಸದನದಲ್ಲಿ ಪ್ರಸಿದ್ಧ ಸಂಗೀತ ವಿದುಷಿ ಡಾ. ಎನ್.ಜೆ. ನಂದಿನಿ ತಿರುವನಂತಪುರ ಅವರಿಂದ ಪ್ರಧಾನ ಕಚೇರಿ ಜರಗಿತು.
ದೀಕ್ಷಿತರ ನಾಟರಾಗದ ಕೃತಿ ಸ್ವಾಮಿನಾಥ ಪರಿಪಾಲಯಾ ಎಂದು ಆರಂಭಿಸಿ, ಚಂದ್ರಜ್ಯೋತಿ ರಾಗದ ಕೃತಿಯನ್ನು ಸೊಗಸಾಗಿ ಪ್ರಸ್ತುತಪಡಿಸಿದ್ದರು. ಊರ್ಮಿಕಾ ರಾಗದ ಅಪೂರ್ವ ಕೃತಿಯನ್ನು ವಿದ್ವತ್‍ಪೂರ್ಣವಾಗಿ ಆಲಾಪಿಸಿದರು. ಕಚೇರಿಯಲ್ಲಿ ತೋಡಿರಾಗವನ್ನು ಪ್ರಧಾನವಾಗಿ ಆಯ್ದುಕೊಂಡು ಸಾಯಿತ್ವದ ಭದ್ರ ನೆಲೆಗಟ್ಟಿನ ಆಲಾಪನೆಯೊಂದಿಗೆ ಹಂತಹಂತವಾಗಿ ವಿಸ್ತರಿಸಿ ತ್ಯಾಗರಾಜ ಸ್ವಾಮಿಗಳ ಮಿಶ್ರಜಂಫೆತಾಳದ ದಾಸುಕೋವಲೇನ ಕೃತಿಯನ್ನು ವಿಶಿಷ್ಟವಾಗಿ ನಿರೂಪಿಸಿದರು. ಮನೋಧರ್ಮ ಸ್ವರಗಳನ್ನು ಆಕರ್ಷಕವಾಗಿ ಮಂಡಿಸಿದರು. ಕೊನೆಯಲ್ಲಿ ಕನಕದಾಸರ ಬಾರೋಕೃಷ್ಣಯ್ಯ ಕೃತಿ ಚೇತೋಹಾರಿಯಾಗಿ ಮೂಡಿಬಂತು. ಸಂಗೀತ ಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾದರು. ವಿದ್ವಾನ್ ಆಲಕ್ಕೋಡ್ ವಿ.ಎಸ್.ಗೋಕುಲ್ ಪೂರಕ ಪಿಟೀಲುವಾದನವನ್ನು ನೀಡಿ ಗಮನಸೆಳೆದರು. ಮೃದಂಗವಾದನದಲ್ಲಿ ಬೋಂಬೇ ಗಣೇಶ್ ಅಯ್ಯರ್ ಮತ್ತು ಘಟಂನಲ್ಲಿ ವಿದ್ವಾನ್ ಶ್ರೀಜಿತ್ ವೆಳ್ಳತ್ತಂಜೂರು ಕಚೇರಿಯ ಯಶಸ್ವಿಗೆ ಕಾರಣರಾದರು. ಮಾತ್ರವಲ್ಲದೆ ವಿಶ್ವಜಂಪೆ ತಾಳದಲ್ಲಿ ನೀಡಿದ ತನಿ ಆವರ್ತನ ರಸಿಕರ ಕರತಾಡನಕ್ಕೆ ಭಾಜನವಾಯಿತು. ಶ್ರೀ ಗೋಪಾಲಕೃಷ್ಣ ಸಂಗೀತಶಾಲೆಯ ಗುರುಗಳಾದ ವಿದುಷಿ ಉಷಾ ಈಶ್ವರ ಭಟ್ ನಿರೂಪಿಸಿದರು. ಡಾ. ಜಯಶ್ರೀ ನಾಗರಾಜ್ ಕಲಾವಿದರನ್ನು ಪರಿಚಯಿಸಿದರು. ಸಂಚಾಲಕ ವಿದ್ವಾನ್ ಬಿ.ಜಿ.ಈಶ್ವರ ಭಟ್ ವಂದಿಸಿದರು.
ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ 26ನೇ ವಾರ್ಷಿಕೋತ್ಸವ: ಶಾಸ್ತ್ರೀಯತೆಯ ಸೊಗಡಿನ ಸುಮಧುರ ಸಂಗೀತ ನೀಡಿದ ಎನ್.ಜೆ.ನಂದಿನಿ
0
ಜನವರಿ 20, 2023