ಕಥುವಾ,: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂದೇಶವನ್ನು ದೇಶದ ಪ್ರತಿ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ 'ಹಾಥ್ ಸೆ ಹಾಥ್ ಜೋಡೊ' ಅಭಿಯಾನವನ್ನು ಕಾಂಗ್ರೆಸ್ ಮುಂದಿನ ವಾರ ಆರಂಭಿಸಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಹೇಳಿದ್ದಾರೆ.
ಎರಡು ತಿಂಗಳ ಅಭಿಯಾನ ಇದಾಗಿದ್ದು, ಜನವರಿ 26ರಂದು ಆರಂಭವಾಗಿ ಮಾರ್ಚ್ 26ರವರೆಗೆ ನಡೆಯಲಿದೆ.
ದೇಶದಲ್ಲಿ ದ್ವೇಷ ಕೊನೆಗಾಣಿಸಿ ಪ್ರೀತಿ ಹಂಚಬೇಕು ಎಂಬ ಸಂದೇಶ ಹೊತ್ತು ರಾಹುಲ್ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಅವರ ಸಂದೇಶವನ್ನು ಪ್ರತಿ ಮನೆಗೆ ತಲುಪಿಸಲು ಕಾಂಗ್ರೆಸ್ ಕಾರ್ಯಕರ್ತರನ್ನು ಎಲ್ಲಾ 2.5 ಲಕ್ಷ ಪಂಚಾಯಿತಿಗಳು, 6 ಲಕ್ಷ ಗ್ರಾಮಗಳು ಮತ್ತು 10 ಲಕ್ಷ ಮತಗಟ್ಟೆಗಳಿಗೆ ಕಳಿಸಲಾಗುವುದು ಎಂದು ಜೈರಾಮ್ ರಮೇಶ್ ಅವರು ಭಾರತ್ ಜೋಡೊ ಯಾತ್ರೆ ವೇಳೆ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ಆರೋಪಪಟ್ಟಿ ಸಿದ್ಧಪಡಿಸಿದೆ. ಅದನ್ನು ದೆಹಲಿಯಲ್ಲಿ ಶನಿವಾರ ಬಿಡುಗಡೆ ಮಾಡಲಾಗುವುದು. ಆರೋಪಪಟ್ಟಿಯ ಪ್ರತಿ ಮತ್ತು ರಾಹುಲ್ ಗಾಂಧಿ ಅವರ ಸಂದೇಶವನ್ನು ತೆಗೆದುಕೊಂಡು ದೇಶದ ಪ್ರತಿ ಮನೆಗೂ ಹೋಗುತ್ತೇವೆ ಎಂದರು.
ರಾಹುಲ್ ನೇತೃತ್ವದ ಭಾರತ್ ಜೋಡೊ ಯಾತ್ರೆಯು ಆರ್‌ಎಸ್‌ಎಸ್-ಬಿಜೆಪಿ ಸಿದ್ಧಾಂತ ಮತ್ತು ಕಾಂಗ್ರೆಸ್ ಸಿದ್ಧಾಂತದ ನಡುವಿನ ಹೋರಾಟ. ಕಾಂಗ್ರೆಸ್ ಸದಾ ಭ್ರಾತೃತ್ವದಲ್ಲಿ ನಂಬಿಕೆಯಿಡುತ್ತದೆ ಎಂದರು.