ಪ್ರಯಾಗರಾಜ್: ಪುಷ್ಯ ಪೂರ್ಣಿಮೆಯಂದು ಇಲ್ಲಿನ ಪವಿತ್ರ ಸಂಗಮದಲ್ಲಿ ಸುಮಾರು 2 ಲಕ್ಷ ಭಕ್ತರು ತೀರ್ಥ ಸ್ನಾನ ಮಾಡುವ ಮೂಲಕ ತಿಂಗಳ ಕಾಲ ನಡೆಯುವ ಮಾಘಮೇಳಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಬೆಳಗಿನ ಜಾವ 4 ಗಂಟೆಯಿಂದಲೇ ಗಂಗಾ, ಯಮುನಾ ಮತ್ತು ಸರಸ್ವತಿ ಸಂಗಮದ ಸ್ನಾನಘಟ್ಟಗಳಿಗೆ ಆಗಮಿಸಿದ ಭಕ್ತರು ವಿಪರೀತ ಚಳಿಯ ನಡುವೆಯೂ ಪವಿತ್ರ ತೀರ್ಥದಲ್ಲಿ ಮಿಂದೆದ್ದರು.
ಈ ವರ್ಷ ಭಕ್ತರ ಅನುಕೂಲಕ್ಕಾಗಿ 14 ಸ್ನಾನ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಮೇಳದಲ್ಲಿನ ಜನಸಂದಣಿ ನಿರ್ವಹಣೆಗಾಗಿ ನಿಯಂತ್ರಣ ಕೇಂದ್ರದಲ್ಲಿ ಪರದೆಗಳನ್ನು ಅಳವಡಿಸಲಾಗಿದೆ ಎಂದು ಮಾಘ ಮೇಳದ ಆಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಕ್ತರ ಸುಗಮ ಸಂಚಾರಕ್ಕಾಗಿ ಗಂಗಾ ನದಿಗೆ ಐದು ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಲಾಗಿದೆ. ಮೇಳ ಪ್ರದೇಶದಲ್ಲಿ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದರು.