ಪಲಕ್ಕಾಡ್: ಕೋಳಿ ಜಗಳದ ವೇಳೆ ವಶಕ್ಕೆ ಪಡೆದ ಎರಡು ಫೈಟರ್ ಹುಂಜಗಳನ್ನು ಹರಾಜಿನಲ್ಲಿ ಖರೀದಿಸಲು ಭಾರಿ ಸಂಖ್ಯೆಯಲ್ಲಿ ಜನರು ಪೈಪೋಟಿ ನಡೆಸಿದ ಅಪರೂಪದ ಪ್ರಸಂಗ ಕೇರಳದ ಪಲಕ್ಕಾಡ್ ಜಿಲ್ಲೆಯ ಚಿತ್ತೂರು ಪೊಲೀಸ್ ಠಾಣೆಯ ಮುಂಭಾಗ ನಡೆದಿದೆ.
ಸಂಕ್ರಾಂತಿ ಅಥವಾ ಪೊಂಗಲ್ ಹಿನ್ನೆಲೆಯಲ್ಲಿ ಕೋಳಿ ಜಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಕಾನೂನಿನ ಪ್ರಕಾರ ಇದು ಅಕ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ದಾಳಿ ಮಾಡಿದ ಚಿತ್ತೂರು ಪೊಲೀಸರು ಎರಡು ಕೋಳಿಗಳನ್ನು ವಶಕ್ಕೆ ಪಡೆದು, ಅದರ ಮಾಲೀಕರಾದ ಸುಭಾಶ್ ಮತ್ತು ಪ್ರದೀಪ್ ಎಂಬುವರನ್ನು ಬಂಧಿಸಿದ್ದಾರೆ. ಅಲ್ಲದೆ, 11 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಶಕ್ಕೆ ಪಡೆದ ಕೋಳಿಗಳನ್ನು ಚಿತ್ತೂರ್ನ ಅಥಿಕೋಡ್ನಲ್ಲಿ ಹರಾಜು ಹಾಕಲಾಯಿತು. ಕೋಳಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಇರುವ ತಾಂತ್ರಿಕ ತೊಂದರೆಗಳನ್ನು ಪರಿಗಣಿಸಿ ಠಾಣೆಯಲ್ಲಿ ಹರಾಜು ನಡೆಸಲಾಯಿತು. ಪೊಲೀಸರು ಎರಡು ಹುಂಜಗಳಿಗೆ 7750 ರೂ. ಗಳಿಸಿದರು. ಚಿತ್ತೂರಿನವರಾದ ಕುಮಾರ್ ಮತ್ತು ವಿಷ್ಣು ಅವರು ಕೋಳಿಗಳನ್ನು ಹರಾಜಿನಲ್ಲಿ ತಮ್ಮದಾಗಿಸಿಕೊಂಡರು.
ಕಳೆದ ಡಿಸೆಂಬರ್‌ನಲ್ಲಿ ಇಡುಕ್ಕಿಯಲ್ಲಿ ನಡೆದ ಹರಾಜಿನಲ್ಲಿ ಒಂದು ಕೋಳಿಗೆ 13,300 ರೂ.ಗೆ ಮಾರಾಟವಾಗಿತ್ತು.