ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 3ರಂದು 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ (ಐಎಸ್‌ಸಿ) ಅನ್ನು ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿಯು ಭಾನುವಾರ ತಿಳಿಸಿದೆ.
ಈ ವರ್ಷದ ಐಎಸ್‌ಸಿಯು 'ಮಹಿಳಾ ಸಬಲೀಕರಣದೊಂದಿಗೆ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ' ಎನ್ನುವ ಆಶಯವನ್ನು ಹೊಂದಿದೆ.
ಜತೆಗೆ ಈ ಸಂಬಂಧ ಚರ್ಚೆಗಳನ್ನೂ ನಡೆಸಲಾಗುವುದು. ಐಎಸ್‌ಸಿಯಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳು ಬೋಧನೆ, ಸಂಶೋಧನೆ ಮತ್ತು ಉದ್ಯಮದ ಉನ್ನತ ಹಂತಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವ ಮಾರ್ಗಗಳನ್ನು ಚರ್ಚಿಸುವರು' ಎಂದೂ ಪ್ರಕಟಣೆ ತಿಳಿಸಿದೆ.
1914ರಲ್ಲಿ ಮೊದಲ ಬಾರಿಗೆ ಐಎಸ್‌ಸಿ ಅನ್ನು ಆಯೋಜಿಸಲಾಗಿತ್ತು. ಈ ಬಾರಿಯ 108ನೇ ಅಧಿವೇಶನವು ರಾಷ್ಟ್ರಸಂತ ತುಕಾಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.
ಐಎಸ್‌ಸಿಯಲ್ಲಿ ಖ್ಯಾತ ಮಹಿಳಾ ವಿಜ್ಞಾನಿಗಳ ಉಪನ್ಯಾಸಗಳೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಹಿಳೆಯರ ಕೊಡುಗೆಯನ್ನು ಪ್ರದರ್ಶಿಸುವ ವಿಶೇಷ ಕಾರ್ಯಕ್ರಮವೂ ನಡೆಯಲಿದೆ. ಇದರ ಜತೆಗೆ ಮಕ್ಕಳ ವಿಜ್ಞಾನ ಕಾಂಗ್ರೆಸ್, ರೈತರು ಮತ್ತು ಬುಡಕಟ್ಟು ವಿಜ್ಞಾನ ಕಾಂಗ್ರೆಸ್ ಕೂಡಾ ನಡೆಯಲಿದೆ ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.