ನವದೆಹಲಿ:ಜೆಇಇ (ಮೈನ್ಸ್)-2023ರ ಜನವರಿ ಪರೀಕ್ಷೆಗೆ 8.6 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಇದು 2022ರ ಜುಲೈನಲ್ಲಿ ನಡೆದ ಪರೀಕ್ಷೆಗೆ ನೋಂದಾಯಿಸಿಕೊಂಡ ಅಭ್ಯರ್ಥಿಗಳ ಸಂಖ್ಯೆಗಿಂತ 6 ಸಾವಿರದಷ್ಟು ಕಡಿಮೆ.
ಪುರುಷ ಅಭ್ಯರ್ಥಿಗಳು ಪ್ರಾಬಲ್ಯ ಮುಂದುವರಿಸಿದ್ದು, ಅರ್ಜಿ ಸಲ್ಲಿಸಿದ ಒಟ್ಟು ಅಭ್ಯರ್ಥಿಗಳ ಪೈಕಿ ಶೇಕಡ 70ರಷ್ಟು ಪುರುಷರು. ಆದರೆ ಇದೇ ಮೊದಲ ಬಾರಿಗೆ ಮಹಿಳೆಯರ ಪಾಲು ಶೇಕಡ 30ನ್ನು ತಲುಪಿದೆ. 2022ರಲ್ಲಿ 2.5 ಲಕ್ಷ ಮಹಿಳೆಯರು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರೆ ಈ ಬಾರಿ 10 ಸಾವಿರದಷ್ಟು ಹೆಚ್ಚಿ, 2.6 ಲಕ್ಷ ಮಹಿಳಾ ಆಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ವರ್ಗವಾರು ಅಂಕಿ ಅಂಶಗಳನ್ನು ಪರಿಗಣಿಸಿದರೆ, ಸಾಮಾನ್ಯ ವರ್ಗದ ಅಭ್ಯರ್ಥಿಗಳ ಸಂಖ್ಯೆ ಶೇಕಡ 41.8ರಿಂದ ಶೇಕಡ 38.3ಕ್ಕೆ ಕುಸಿದಿದೆ. ಆದರೆ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಸಂಖ್ಯೆ 35.7ರಿಂದ ಶೇಕಡ 37.1ಕ್ಕೆ ಹೆಚ್ಚಿದೆ. ಆರ್ಥಿಕವಾಗಿ ದುರ್ಬಲರಾದ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಸಂಖ್ಯೆ ಶೇಕಡ 8 ರಿಂದ 11.6ಕ್ಕೆ ಹೆಚ್ಚಿದೆ.
ರಾಜ್ಯವಾರು ನೋಡಿದರೆ ಮಹಾರಾಷ್ಟ್ರದಲ್ಲಿ ಅತ್ಯಧಿಕ ಅಂದರೆ 1,03,039 ಮಂದಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಇದು ಒಟ್ಟು ಅಭ್ಯರ್ಥಿಗಳ ಶೇಕಡ 12ರಷ್ಟು. ಉತ್ತರ ಪ್ರದೇಶದಲ್ಲಿ 99714 (11.6%) ಮತ್ತು ಆಂಧ್ರಪ್ರದೇಶದಲ್ಲಿ 91,799 (10.6%) ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರೆ. 50 ಸಾವಿರಕ್ಕಿಂತ ಅಧಿಕ ಅಭ್ಯರ್ಥಿಗಳಿರುವ ಇತರ ಎರಡು ರಾಜ್ಯಗಳೆಂದರೆ ತೆಲಂಗಾಣ (86840) ಮತ್ತು ರಾಜಸ್ಥಾನ (59,641).