ನವದೆಹಲಿ: ಇತ್ತೀಚೆಗೆ ವಿಮಾನಯಾನ ಸಂಸ್ಥೆಗಳು ಅಜಾಗರೂಕತೆಯಿಂದ ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು ಹಾರುತ್ತಿರುವ ಘಟನೆಗಳು ಹೆಚ್ಚುತ್ತಿದ್ದು, ಅಮೃತಸರ-ಸಿಂಗಪುರ ಮಾರ್ಗದ ಸ್ಕೂಟ್ ಏರ್‌ಲೈನ್ಸ್ ವಿಮಾನವು ಬುಧವಾರ 35 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಆಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಮೃತಸರದಿಂದ ಸಿಂಗಪುರ ಮಾರ್ಗದ ಸ್ಕೂಟ್ ಏರ್‌ಲೈನ್ಸ್ ವಿಮಾನವು ಬುಧವಾರ 35 ಪ್ರಯಾಣಿಕರನ್ನು ಬಿಟ್ಟು ಹೊರಟಿದೆ ಎಂದು ವರದಿಯಾಗಿದ್ದು, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಈ ವೈಫಲ್ಯದ ಬಗ್ಗೆ ತನಿಖೆಗೆ ಆದೇಶಿಸಿದೆ.
ಅಮೃತಸರ ವಿಮಾನ ನಿಲ್ದಾಣದಿಂದ ವಿಮಾನವು ಬುಧವಾರ ರಾತ್ರಿ 7.55 ಕ್ಕೆ ಹೊರಡಬೇಕಿತ್ತು, ಆದರೆ 35 ಪ್ರಯಾಣಿಕರನ್ನು ಬಿಟ್ಟು 3 ಗಂಟೆಗೆ ಟೇಕ್ ಆಫ್ ಆಗಿತ್ತು. ಘಟನೆಗೆ ಕಾರಣ ತಿಳಿದುಬಂದಿಲ್ಲ.
ಘಟನೆಯಿಂದ ಕೆರಳಿದ ಪ್ರಯಾಣಿಕರು ಅಮೃತಸರ ವಿಮಾನ ನಿಲ್ದಾಣದಲ್ಲಿಯೇ ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ದಾಖಲಿಸಿದ್ದಾರೆ.
ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಗೋ ಫಸ್ಟ್ ವಿಮಾನವು 55 ಪ್ರಯಾಣಿಕರನ್ನು ಬಿಟ್ಟು ಹಾರಿದ್ದು ಇತ್ತೀಚೆಗೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಈಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.