ಬದಿಯಡ್ಕ: ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕುಂಬಳೆ ಉಪಜಿಲ್ಲಾ ಮಟ್ಟದ ಮೂರು ದಿನಗಳ ಪಟಾಲಂ ನಾಯಕರ ತರಬೇತಿ ಶಿಬಿರ ಶುಕ್ರವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಪ್ರಾರಂಭವಾಯಿತು. ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಾರಡ್ಕ ಉದ್ಘಾಟಿಸಿ ಮಾತನಾಡಿ ಶಿಸ್ತುಬದ್ಧವಾದ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗಿದೆ. ಶಾಲೆಯ ಎಲ್ಲಾ ವಿದ್ಯಾರ್ಥಿಗಳೂ ಪಾಠೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಸಂಚಾಲಕ ಜಯಪ್ರಕಾಶ ಪಜಿಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿ ಕುಂಬಳೆ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶಶಿಧರ ಮಾತನಾಡಿ, ಯಾರು ನೇತೃತ್ವವನ್ನು ನೀಡುತ್ತಾನೋ ಅವನೇ ನಾಯಕ, ಅಂತಹವರನ್ನು ಸೃಷ್ಟಿಸುವ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಸಮಾಜದಲ್ಲಿ ಇತರರೊಂದಿಗೆ ಬೆರೆಯುವ ಸ್ವಭಾವವನ್ನು ರೂಢಿಸಿಕೊಳ್ಳುತ್ತಾರೆ ಎಂದರು.
ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಕಂಡೆತ್ತೋಡಿ, ಮಾತೃಸಮಿತಿಯ ರೇಶ್ಮಾ ಕನಕಪ್ಪಾಡಿ, ಆಡಳಿತ ಸಮಿತಿ ಸದಸ್ಯ ಈಶ್ವರ ಭಟ್ ಹಳೆಮನೆ, ಬಿಪಿಸಿಯ ಜಯರಾಂ, ಶಿಬಿರ ನಾಯಕ ಸೂರ್ಯನಾರಾಯಣ ಭಟ್ ಎಚ್., ಚಂದ್ರಾವತಿ, ಡಿಒಸಿಗಳಾದ ವಿಜಯ ಕುಮಾರ್, ಪವಿತ್ರ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸ್ಕೌಟ್ ಹಾಗೂ ಗೈಡ್ ಸೇವೆಗೈದ ನೀರ್ಚಾಲು ಶಾಲಾ ಅಧ್ಯಾಪಿಕೆ ವಾಣಿ ಹಾಗೂ ಮುಳ್ಳೇರಿಯ ಎಯುಪಿ ಶಾಲೆಯ ಅರವಿಂದಾಕ್ಷನ್ ಅವರನ್ನು ಗೌರವಿಸಲಾಯಿತು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಸ್ವಾಗತಿಸಿ, ರವಿರಾಜ್ ಅಗಲ್ಪಾಡಿ ವಂದಿಸಿದರು. ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಕುಂಟಿಕಾನ ನಿರೂಪಿಸಿದರು. ಜ.16ರಂದು ಸೋಮವಾರ ಶಿಬಿರವು ಸಮಾರೋಪಗೊಳ್ಳಲಿದೆ. ವಿವಿಧ ಶಾಲೆಗಳ ಒಟ್ಟು 120 ಮಂದಿ ವಿದ್ಯಾರ್ಥಿಗಳು ಶಿಬಿರದಲ್ಲಿದ್ದಾರೆ.