ಪೆರ್ಲ: ಕಲೆ ಅನ್ನೊದು ಕಲಾವಿದನಿಗೆ ಕಾಯಕ ವೃತ್ತಿಯ ಜತೆಗೆ ಆರಾಧನ ಭಾವದ ಪ್ರವೃತ್ತಿಗೂ ಸಾಧನೆಯಾಗುತ್ತದೆ ಎಂಬುವುದಕ್ಕೆ ಗಡಿನಾಡದ ಪೆರ್ಲದ ಪ್ರಖ್ಯಾತ ಯುವ ಶಿಲ್ಪಿ ಚಂದ್ರಹಾಸ ಅವರ ಕಲೆ ಹಾಗೂ ಸಾಧನೆ ಸಾಕ್ಷಿಯಾಗಿದೆ.
ಗುಜರಾತಿನ ಅಂಬಾಜಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ನಾಲ್ಕನೇ ಸಾಂಪ್ರದಾಯಿಕ ಶಿಲ್ಪ ಶಿಬಿರದಲ್ಲಿ ಭಾಗವಹಿಸಿ ಇವರು ಕೆತ್ತಿದ ಆಕರ್ಷಣೀಯ ಅಮೃತ ಶಿಲ್ಪ ವಿಗ್ರಹವು ಜನ ಮನ್ನಣೆಗೆ ಪಾತ್ರವಾಗಿದೆ. ಗುಜರಾತಿನ ಗಣಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ನೇತೃತ್ವದಲ್ಲಿ ಅಂಬಾಜಿಯ ಅರ್ಟಿಸನ್ ಪಾರ್ಕ್ ಟ್ರೈನಿಂಗ್ ಇನ್ಸೂಟ್ಯೂಟ್ ಮೂಲಕ 20 ದಿನಗಳ "ಶಿಲ್ಪ ಸ್ಮೃತಿ " ಎಂಬ ಶಿಬಿರವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ವಿವಿಧ ರಾಜ್ಯವನ್ನು ಪ್ರತಿನಿಧೀಕರಿಸಿಕೊಂಡು ಶಿಲ್ಪಿಗಳು ಭಾಗವಹಿಸಿದ್ದು ಕೇರಳ ರಾಜ್ಯದಿಂದ ಪೆರ್ಲದ ಚಂದ್ರಹಾಸ್ ಆಯ್ಕೆಯಾಗಿದ್ದರು. ಇವರು 20 ದಿನಗಳ ಅಂತರದಲ್ಲಿ ಬಿಳಿ ಅಮೃತ ಶಿಲೆಯಲ್ಲಿ ದೇವಿ ವಿಗ್ರಹವೊಂದನ್ನು ರಚಿಸಿದ್ದಾರೆ. ಅಂಬಾಜಿಯಲ್ಲಿರುವ ಶಕ್ತಿಪೀಠವಾದ ಗಬ್ಬರ್ ಹಿಲ್ ಬೆಟ್ಟದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇದನ್ನು ಸ್ಥಾಪಿಸಿ ಲೋಕಾರ್ಪಣಾ ಕಾರ್ಯ ಜರಗಲಿದ್ದು ವಿಗ್ರಹ ನಿರ್ಮಾಣ ಕಾರ್ಯ ಪೂರ್ತಿಯಾದಾಗ ಚಂದ್ರಹಾಸ್ ಅವರನ್ನು ಇಲಾಖಾ ವರಿಷ್ಠರು ಸನ್ಮಾನಿಸಿದರು.
ಬಾಲ್ಯಕಾಲದಿಂದಲೇ ಚಿತ್ರ ರಚನೆಯಲ್ಲಿ ಗಮನ ಸೆಳೆಯುತ್ತಿದ್ದ ಚಂದ್ರಹಾಸ ಪೆರ್ಲ ಅವರು ಉದ್ಯಮಿ ನಾರಾಯಣ ಚೆಟ್ಟಿಯಾರ್ - ಪಾರ್ವತಿ ದಂಪತಿಗಳ ಪುತ್ರನಾಗಿದ್ದು ಪೆರ್ಲ ಸ.ನಾ.ಶಾಲೆಯಲ್ಲಿ ಎಸ್ಸಸೆಲ್ಸಿ ಪೂರೈಸಿ ಕಾಸರಗೋಡಿನ ರಿಥಂ ಆರ್ಟ್ ಕಾಲೇಜಿನಲ್ಲಿ ಫೈನ್ ಆಟ್ರ್ಸ್ ಕೋರ್ಸ್ ಹಾಗೂ ಕಾರ್ಕಳದ ಸಿಇ ಕಾಮತ್ ಇನ್ಸೂಟ್ಯೂಟ್ ಆಫ್ ಅರ್ಟಿಸನ್ ಕಾಲೇಜಿನಲ್ಲಿ ಶಿಲ್ಪಕಲೆಯ ಬಗ್ಗೆ ತರಬೇತಿ ಪಡೆದಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಪೆರ್ಲ ಚೆಕ್ ಪೋಸ್ಟ್ ಬಳಿ "ಆಕಾರ್ ಹ್ಯಾಂಡ್ ಕ್ರಾಪ್ಟ್ " ಎಂಬ ಉದ್ಯೋಗ ಸಂಸ್ಞೆಯನ್ನು ಸ್ಥಾಪಿಸಿ ವಿವಿದೆಡೆಯ ಶಿಲ್ಪ ನಿರ್ಮಾಣ ಕಾಯಕ ನಡೆಸುತ್ತಿದ್ದಾರೆ. ತುಳುನಾಡಿನ ಇತಿಹಾಸ ಪ್ರಸಿದ್ಧ ಗೆಜ್ಜೆಗಿರಿ ಕ್ಷೇತ್ರ, ಈಶ್ವರಮಂಗಲ ಪಂಚಲಿಂಗೇಶ್ವರ ಕ್ಷೇತ್ರ, ಕಾರ್ಕಳ ಜಲದುರ್ಗಾ ಕ್ಷೇತ್ರ, ಹೊರನಾಡು ಮುಖ್ಯಪ್ರಾಣ ಅಂಜನೇಯ ಕ್ಷೇತ್ರ, ಇಡಿಯಡ್ಕ ಉಳ್ಳಾಲ್ತಿ ಕ್ಷೇತ್ರ, ನೆಲ್ಲಿಕುಂಜೆ ವಿಷ್ಣುಮೂರ್ತಿ ದೇವಸ್ಥಾನಗಳಲ್ಲದೆ ಹಲವಾರು ದೈವಸ್ಥಾನ,ತರವಾಡು ಮನೆಗಳ ಶಿಲ್ಪ ಕೆಲಸಗಳನ್ನು ನಿರ್ವಹಿಸುವುದರಲ್ಲಿ ಚಂದ್ರಹಾಸ್ ಜನಪ್ರಿಯರಾಗಿದ್ದಾರೆ.