ನವದೆಹಲಿ: ಬ್ಯಾಂಕ್ ಆಫ್ ಬರೋಡಾ ನೇತೃತ್ವದ 17 ಬ್ಯಾಂಕ್‌ಗಳ ಒಕ್ಕೂಟಕ್ಕೆ ₹ 4,957 ಕೋಟಿ ವಂಚಿಸಿದ್ದಕ್ಕಾಗಿ ಮುಂಬೈ ಮೂಲದ ಪ್ರತಿಭಾ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಅದರ ನಾಲ್ವರು ನಿರ್ದೇಶಕರು ಮತ್ತು ಜಾಮೀನುದಾರರ ವಿರುದ್ಧ ಸಿಬಿಐ ಗುರುವಾರ ಎಫ್‌ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿ ಕ್ಷೇತ್ರದ ಕಂಪನಿ, ವಿನ್ಯಾಸ, ಎಂಜಿನಿಯರಿಂಗ್ ಮತ್ತು ನಿರ್ಮಾಣ ಮೊದಲಾದ ಕ್ಷೇತ್ರದಲ್ಲಿ ವಹಿವಾಟು ನಡೆಸುತ್ತಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ಆರೋಪಿಗಳು ಸಾಲ ಪಡೆದ ಕಂಪನಿಯ ಅಪಾರ ಪ್ರಮಾಣದ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದು, ಕಂಪನಿ ಹೆಸರಿಗೆ ಸಾಲ ಹೊರಿಸಲಾಗಿದೆ ಎಂಬ ಆರೋಪವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 12, 2022 ರಂದು ಪ್ರತಿಭಾ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕರಾದ ಅಜಿತ್ ಭಗವಾನ್ ಕುಲಕರ್ಣಿ, ರವಿ ಕುಲಕರ್ಣಿ, ಸುನಂದಾ ದತ್ತಾ ಕುಲಕರ್ಣಿ ಮತ್ತು ಶರದ್ ಪ್ರಭಾಕರ ದೇಶಪಾಂಡೆ ವಿರುದ್ಧ ಬ್ಯಾಂಕ್ ಆಫ್ ಬರೋಡಾ ದೂರು ದಾಖಲಿಸಿತ್ತು. ₹4957.31 ಕೋಟಿ ಬ್ಯಾಂಕ್ ಆಫ್ ಬರೋಡಾ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ದೂರನ್ನು ಸ್ವೀಕರಿಸಿದ ಸಿಬಿಐ, ಹಲವು ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ದೂರು ಪರಿಶೀಲಿಸಲು ತಂಡವನ್ನು ರಚಿಸಿತ್ತು.