ನವದೆಹಲಿ:ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಪರೀಕ್ಷೆಗಳನ್ನು ನಡೆಸಲು ಮಹಿಳೆಯರಿಗೆ 35 ವರ್ಷ ಪ್ರಾಯ ಮಿತಿಯ ವಿರುದ್ಧದ ಮನವಿಗೆ ಪ್ರತಿಕ್ರಿಯೆ ಸಲ್ಲಿಸಲು ಸುಪ್ರೀಂ ಕೋರ್ಟ್(Supreme Court) ಕೇಂದ್ರ ಸರಕಾರಕ್ಕೆ ಸೋಮವಾರ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಹಾಗೂ ಎ.ಎಸ್. ಓಕಾ ಅವರನ್ನು ಒಳಗೊಡ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತು.
ಕಳೆದ ವರ್ಷ ಅಕ್ಟೋಬರ್ 17ರಂದು ನ್ಯಾಯಾಲಯ ನೋಟಿಸು ನೀಡಿದ ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ಸಲ್ಲಿಸಲು ಸ್ಪಲ್ಪ ಕಾಲಾವಕಾಶ ನೀಡುವಂತೆ ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಮನವಿ ಮಾಡಿದರು. ''ಪ್ರತಿ ಅಫಿಡಾವಿಟ್ ಸಲ್ಲಿಸಲು ಸಮಯಾವಕಾಶ ನೀಡುವಂತೆ ಪ್ರತಿವಾದಿ ಪರ ವಕೀಲರು ಕೋರಿದ್ದಾರೆ. ಅವರು ನಾಲ್ಕು ವಾರಗಳಲ್ಲಿ ಅಗತ್ಯವಾಗಿರುವುದನ್ನು ಪೂರ್ಣಗೊಳಿಸಲಿದ್ದಾರೆ. ಮರು ಲಗತ್ತಿಸಲು ಏನಾದರೂ ಇದ್ದರೆ, ಎರಡು ವಾರಗಳಲ್ಲಿ ಸಲ್ಲಿಸಬೇಕು'' ಎಂದು ಪೀಠ ಹೇಳಿದೆ.
ನ್ಯಾಯವಾದಿ ಮೀರಾ ಕೌರಾ ಪಟೇಲ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ 8 ವಾರಗಳ ಬಳಿಕ ನಡೆಸಲಿದೆ. ಮಹಿಳೆಯರ ಪ್ರತ್ಯುತ್ಪಾದನಾ ಹಕ್ಕಿನ ಮೇಲಿನ ನಿರ್ಬಂಧಕ್ಕೆ 35 ವರ್ಷ ಪ್ರಾಯ ಮಿತಿ ಎಂದು ಪ್ರತಿಪಾದಿಸುವ ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಪರೀಕ್ಷಾ ತಂತ್ರ (ಲಿಂಗ ಆಯ್ಕೆ ನಿಷೇಧ) ಕಾಯ್ದೆ 1994ರ ಸೆಕ್ಷನ್ 4 (3)ನ್ನು ದೂರುದಾರರು ಉಲ್ಲೇಖಿಸಿರುವುದನ್ನು 2022 ಅಕ್ಟೋಬರ್ 17ರ ತನ್ನ ಆದೇಶದಲ್ಲಿ ಪೀಠ ಗಮನಿಸಿದೆ. ಈ ಕಾಯ್ದೆಯ ನಿಯಮದ ಪ್ರಕಾರ ಪ್ರಸವ ಪೂರ್ವ ಪರೀಕ್ಷಾ ತಂತ್ರವನ್ನು 35 ವರ್ಷ ವಯಸ್ಸಿಗಿಂತ ಕೆಳಗಿನ ಗರ್ಭಿಣಿಯರ ಮೇಲೆ ನಡೆಸಬಾರದು.