ನವದೆಹಲಿ: ಕೋವಿಡ್ ಸಾಂಕ್ರಾಮಿಕದ ಬಳಿಕ ಟ್ಯೂಷನ್‌ಗೆ ಹೋಗುವ ಶಾಲಾ ವಿದ್ಯಾರ್ಥಿಗಳ ಪ್ರಮಾಣದಲ್ಲಿ ದೇಶದಲ್ಲಿ ಶೇ 4ರಷ್ಟು ಹೆಚ್ಚಳವಾಗಿದೆ ಎನ್ನುವ ಅಂಶ ಬುಧವಾರ ಬಿಡುಗಡೆಯಾದ ವಾರ್ಷಿಕ ಶಿಕ್ಷಣ ವರದಿಯಲ್ಲಿ (ಎಎಸ್‌ಇಆರ್) 2022 ಬಹಿರಂಗವಾಗಿದೆ.
ಉತ್ತರಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಶಾಲೆಯ ಬಳಿಕ ಟ್ಯೂಷನ್‌ಗೆ ಹೋಗುವ ವಿದ್ಯಾರ್ಥಿಗಳ ಪ್ರಮಾಣವು ಶೇ 8ರಷ್ಟು ಹೆಚ್ಚಳವಾಗಿದೆ. ಗ್ರಾಮೀಣ ಭಾರತದಲ್ಲಿ ಕಳೆದ ದಶಕದಲ್ಲಿ 1ರಿಂದ 8ನೇ ತರಗತಿಯ ಮಕ್ಕಳು ಖಾಸಗಿ ಟ್ಯೂಷನ್‌ಗೆ ಹೋಗುವ ಪ್ರಮಾಣದಲ್ಲಿ ಸ್ಥಿರವಾದ ಹೆಚ್ಚಳ ಕಂಡುಬಂದಿದೆ ಎಂದೂ ವರದಿಯು ಗಮನ ಸೆಳೆದಿದೆ.
'2018ರಿಂದ 2022ರ ನಡುವಿನ ಅವಧಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಟ್ಯೂಷನ್‌ಗೆ ಹೋಗುವ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ರಾಷ್ಟ್ರಮಟ್ಟದಲ್ಲಿ 2018ರಲ್ಲಿ 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಟ್ಯೂಷನ್‌ಗೆ ಹೋಗುವ ಪ್ರಮಾಣದಲ್ಲಿ ಶೇ 26.4ರಷ್ಟು ಹಾಗೂ 2022ರಲ್ಲಿ ಈ ಪ್ರಮಾಣವು ಶೇ 30.5ರಷ್ಟು ಹೆಚ್ಚಳವಾಗಿದೆ' ಎಂದು ಎಎಸ್‌ಇಆರ್ ನಡೆಸಿದ ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.
'ಬಿಹಾರದಲ್ಲಿ ಶೇ 70ರಷ್ಟು ಮಕ್ಕಳು ಹಾಗೂ ಜಾರ್ಖಂಡ್‌ನಲ್ಲಿ ಶೇ 45ರಷ್ಟು ಮಕ್ಕಳು ಟ್ಯೂಷನ್‌ಗೆ ಹೋಗುತ್ತಿದ್ದಾರೆ. ಈ ಪ್ರಮಾಣವು ಹಿಮಾಚಲ ಪ್ರದೇಶದಲ್ಲಿ ಶೇ 10ರಷ್ಟಿದ್ದರೆ, ಮಹಾರಾಷ್ಟ್ರದಲ್ಲಿ ಶೇ 15ರಷ್ಟಿದೆ. ಕೋವಿಡ್ ಸಂದರ್ಭದಲ್ಲಿ ಉಂಟಾದ ಕಲಿಕಾ ನ್ಯೂನತೆಯನ್ನು ಸರಿಪಡಿಸಲು ಟ್ಯೂಷನ್ ಈ ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ಸಹಾಯಕವಾಗಿದೆ' ಎನ್ನಲಾಗಿದೆ.
ಮಕ್ಕಳು ಹೆಚ್ಚಾಗಿ ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಟ್ಯೂಷನ್‌ಗೆ ಹೋಗುತ್ತಿದ್ದಾರೆ ಎಂಬುದು ವರದಿಯಲ್ಲಿ ತಿಳಿದುಬಂದಿದೆ.