ಚೆನ್ನೈ: ತಮಿಳುನಾಡಿನ ರಾಣಿಪೇಟ್ ಜಿಲ್ಲೆಯ ಅರಕ್ಕೋಣಂನ ದೇವಸ್ಥಾನದ ಉತ್ಸವದ ವೇಳೆ ಕ್ರೇನ್ ಕುಸಿದು ಬಿದ್ದ ಪರಿಣಾಮ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ತಡರಾತ್ರಿ ಅವಘಡ ಸಂಭವಿಸಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ಕ್ರೇನ್ ಮೂಲಕ ದೇಗುಲಕ್ಕೆ ಪ್ರದಕ್ಷಿಣೆ ಹಾಕಲಾಗುತ್ತಿತ್ತು. ಹರಕೆ ತೀರಿಸಲು ನೆರೆದಿದ್ದ ಭಕ್ತರಿಂದ ಹೂವಿನ ಹಾರ ಸ್ವೀಕರಿಸುತ್ತಿದ್ದ ವೇಳೆ ಕ್ರೇನ್ ಏಕಾಏಕಿ ಕುಸಿದು ಬಿದ್ದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಎಸ್. ಭೂಪಾಲನ್ (40), ಬಿ. ಜೋತಿಬಾಬು (17), ಕೆ. ಮುತ್ತುಕುಮಾರ್ (39) ಮತ್ತು ಚಿನ್ನಸಾಮಿ (60) ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕ್ರೇನ್ ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನೆಮೇಲಿಯ ಕೆಳ್‌ವೀದಿಯಲ್ಲಿರುವ ದ್ರೌಪತಿಯಮ್ಮನ್, ಮಾಂಡಿಯಮ್ಮನ್ ದೇಗುಲಗಳಲ್ಲಿ ಮಯಿಲೇರುಮ್ ತಿರುವಿಳಾ ಆಚರಣೆ ವೇಳೆ ಅವಘಡ ನಡೆದಿದೆ. ಸುಗ್ಗಿಯ ಹಬ್ಬ ಪೊಂಗಲ್ ಬಳಿಕ ನಡೆಯುವ ವಾರ್ಷಿಕ ಆಚರಣೆ ಇದಾಗಿದೆ.