ಆಂಧ್ರ ಪ್ರದೇಶ: ಸರ್ಕಾರ ಎಲ್ಲಾ ಮಕ್ಕಳು ಕಡ್ಡಾಯ ಶಿಕ್ಷಣಕ್ಕೆ ಒಳಪಡಬೇಕು ಎಂಬ ಕಾನೂನನ್ನು ಜಾರಿಗೊಳಿಸಿದೆ. ಆದರೆ ಕೆಲವೊಂದು ಭಾಗದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಕಷ್ಟ ಪಡಬೇಕಾದ ಪರಿಸ್ಥಿತಿ ಇಂದಿಗೂ ಚಾಲ್ತಿಯಲ್ಲಿದೆ. ಇದಕ್ಕೆ ಕಾರಣ ಮೂಲಭೂತ ಸಮಸ್ಯೆ ಎಂದರೆ ತಪ್ಪಲ್ಲ.
ಇಂದಿಗೂ ಪ್ರತಿಯೊಂದು ಹಳ್ಳಿಯನ್ನು ಸಂಪರ್ಕಿಸುವಲ್ಲಿ ಸರ್ಕಾರಿ ಸ್ವಾಮ್ಯದ ಸಾರಿಗೆ ಇಲಾಖೆ ಸೋತಿರುವುದನ್ನು ಕಾಣಬಹುದು. ಹೀಗಾಗಿ ಆಧುನಿಕವಾಗಿ ಬದಲಾಗುತ್ತಿರುವ ಕಾಲಘಟ್ಟದಲ್ಲೂ ಕೆಲವು ಹಳ್ಳಿ ಪ್ರದೇಶದ ಮಕ್ಕಳು ಕಡ್ಡಾಯ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಇದೀಗ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯಲ್ಲಿರುವ ನೀರೆಡು ಬಂಡಾ ಎಂಬ ಪುಟ್ಟ ಹಳ್ಳಿಯ ಮಕ್ಕಳು ಶಾಲೆಗೆ ನಿತ್ಯ ನಡೆದುಕೊಂಡೇ ಹೋಗಬೇಕು. ಕಾಡು ದಾರಿ ಆಗಿದ್ದರಿಂದ ಕಷ್ಟ ಪಟ್ಟು ಹೋಗಬೇಕಾದ ಪರಿಸ್ಥಿತಿ. ಕೊನೆಗೆ ಹಳ್ಳಿಯ ನಾಗರೀಕರು ಸೇರಿಕೊಂಡು ಮುಳ್ಳಿನ ಪೊದೆಗಳಿಂದ ತುಂಬಿದ್ದ ಕಾಡುದಾರಿಯನ್ನು ದುರಸ್ತಿ ಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಮೊದಲು ಕುದುರೆ ಮೇಲೆ ತಮ್ಮ ಮಕ್ಕಳನ್ನು ಕುಳ್ಳಿರಿಸಿ ಶಾಲೆಗೆ ಕಳುಹಿಸುತ್ತಿದ್ದರು.
ಈ ಗ್ರಾಮದ ಜನರ ಕೂಗನ್ನು ಯಾವೊಬ್ಬ ಜನಪ್ರತಿನಿಧಿಯೂ ಆಲಿಸಿಲ್ಲ. ನಮ್ಮ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಎಚ್ಚೆತ್ತ ಗ್ರಾಮಸ್ಥರು ತಾವೇ ಮುಂದೆ ನಿಂತು ಸುಮಾರು 4 ಕಿ.ಮೀ ದೂರದ ದಾರಿಯನ್ನು ದುರಸ್ತಿ ಮಾಡಿದ್ದಾರೆ.
ನೀರೆಡು ಬಂಡಾ ಎಂಬ ಗ್ರಾಮ ಕಾಡಂಚಿನಲ್ಲಿದೆ. ಅಲ್ಲೂರಿ ಸೀತಾ ರಾಮರಾಜು ಜಿಲ್ಲೆಯ ಚೀಮಲಪಾಡು ಪಂಚಾಯತ್‌ನಿಂದ 16 ಕಿಮೀ ಮತ್ತು ರವಿಕಮಠಂ ಮಂಡಲದಿಂದ 25 ಕಿಮೀ ದೂರದಲ್ಲಿದೆ. ಕೊಂಡು ಬುಡಕಟ್ಟು ಜನಾಂಗಕ್ಕೆ ಸೇರಿದ ಸುಮಾರು 12 ಕುಟುಂಬಗಳು ಈ ಗ್ರಾಮದಲ್ಲಿ ವಾಸವಾಗಿದ್ದಾರೆ.