ಕಾಸರಗೋಡು: ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿರುವ ಮಂಜೇಶ್ವರ ತಾಲೂಕು ಎಣ್ಮಕಜೆ ಪಂಚಾಯಿತಿಯ ಕಾಟುಕುಕ್ಕೆ ಬಾಳೆಮೂಲೆಯಲ್ಲಿರುವ ಹಂದಿಫಾರ್ಮ್‍ನಲ್ಲಿರುವ ಹಂದಿಗಳನ್ನು ಸಾಮೂಹಿಕವಾಗಿ ಹತ್ಯೆಮಾಡುವ ಪ್ರಕ್ರಿಯೆ ಶುಕ್ರವಾರ ನಡೆಯಿತು.
ರೋಗ ವ್ಯಾಪನ ತಡೆಗಟ್ಟುವ ನಿಟ್ಟಿನಲ್ಲಿ ಫಾರ್ಮಿನಲ್ಲಿರುವ ಎಲ್ಲ 532 ಹಂದಿಗಳನ್ನು ಹತ್ಯೆಮಾಡಿ ವೈಜ್ಞಾನಿಕವಾಗಿ ಸಂಸ್ಕರಿಸಲಾಯಿತು. ಜಿಲ್ಲಾ ಮೃಗಸಂರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಪಶುವೈದ್ಯರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ತಂಡದಿಂದ ಹಂದಿಗಳನ್ನು ದಯಾಮರಣದ ಮೂಲಕ ಹತ್ಯೆಮಾಡಲಾಗಿದೆ. ಹಂದಿಗಳ ಹತ್ಯೆನಡೆಸಲು ವಿಶೇಷ ತರಬೇತಿಯನ್ನೂ ತಂಡಕ್ಕೆ ನೀಡಲಾಗಿದೆ. ವಿಶೇಷ ಪಿ.ಪಿ ಕಿಟ್ ಧರಿಸಿ ಸಂಪೂರ್ಣ ಸುರಕ್ಷಾ ಕ್ರಮಗಳೊಂದಿಗೆ ಇಲೆಕ್ಟ್ರಿಕ್ ಸ್ಟನ್ನರ್ ಬಳಸಿ ಶಾಕ್ ಟ್ರೀಟ್‍ಮೆಂಟ್ ಮೂಲಕ ಹಂದಿಗಳನ್ನು ಒಂದೊಂದಾಗಿ ಹತ್ಯೆಮಾಡಲಾಯಿತು. ತಲಾ ಎಂಟು ಜನರ ಎರಡು ತಂಡಗಳು ಫಾರ್ಮಿನಲ್ಲಿರುವ ಹಂದಿಗಳನ್ನು ನಾಶಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು.
ಪ್ರವೇಶಕ್ಕೆ ನಿಯಂತ್ರಣ:
ಬಾಳೆಮೂಲೆಯ ಹಂದಿ ಫಾರ್ಮ್ ಒಳಗೊಂಡ ಪ್ರದೇಶಕ್ಕೆ ಕಾರ್ಯಾಚರಣೆ ನೇತೃತ್ವ ವಹಿಸಿದವರ ಹೊರತು ಉಳಿದವರಿಗೆ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಬೆಳಗ್ಗೆ 9ಕ್ಕೆ ಕಾರ್ಯಾಚರಣೆ ಆರಂಭಗೊಂಡಿತ್ತು. ಹಂದಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ಹಂದಿಗಳನ್ನು ಸಾಮೂಹಿಕವಗಿ ಹತ್ಯೆಮಾಡುವಂತೆ ಆದೇಶವಿದ್ದರೂ, ಸನಿಹ ಯಾವುದೇ ಹಂದಿಫಾರ್ಮ್‍ಗಳು ಅಸ್ತಿತ್ವದಲ್ಲಿ ಇರದ ಕಾರಣ ರೋಗಪತ್ತೆಯಾಗಿರುವ ಫಾರ್ಮಿನ ಹಂದಿಗಳನ್ನು ಮಾತ್ರ ಹತ್ಯೆಮಾಡಲಾಯಿತು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರು ಕಡ್ಡಾಯವಾಗಿ ಮೂರು ದಿವಸಗಳ ಕಾಲ ಕ್ವಾರಂಟೈನ್ ತೆರಳಬೇಕಾಗಿದೆ. ಹಂದಿಗಳ ಸಾಮೂಹಿಕ ಹತ್ಯೆ ಹಿನ್ನೆಲೆಯಲ್ಲಿ ಪೆರ್ಲ ಮೃಗಾಸ್ಪತ್ರೆಯಲ್ಲಿ ಪ್ರತ್ಯೇಕ ನಿಯಂತ್ರಣ ಕೊಠಡಿ ತೆರೆಯಲಾಗಿತ್ತು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಎ.ಕೆ ರಮೇಂದ್ರನ್ ಅವರ ಮೇಲ್ನೋಟದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಚರಣೆ ಬಳಿಕ ಅಗ್ನಿಶಾಮಕ ದಳದಿಂದ ಪರಿಸರವನ್ನು ನೀರು, ಕ್ರಿಮಿನಾಶಕ ಸಿಂಪಡಿಸುವ ಮೂಲಕ ಅಣುವಿಮುಕ್ತಗೊಳಿಸಲಾಯಿತು. ಪೆÇಲೀಸ್, ಕಂದಾಯ, ಸ್ಥಳೀಯಾಡಳಿತ ಸಂಸ್ಥೆ, ಮೋಟಾರು ವಾಹನ ಇಲಾಖೆ, ಅಗ್ನಿಶಾಮಕ ಮತ್ತು ರಕ್ಷಣಾ ಮತ್ತು ಕಂದಾಯ ಇಲಾಖೆಗಳು ಅಗತ್ಯ ನೆರವು ಒದಗಿಸಿತ್ತು.
ಮನುಷ್ಯರಿಗೆ ಹರಡದು:
ಹಂದಿ ಜ್ವರದ ಬಗ್ಗೆ ಜನರು ಆತಂಕಿತರಾಗಬೇಕಾಗಿಲ್ಲ. ಇದು ಮನುಷ್ಯರಿಗೆ ಯಾವ ರೀತಿಯಲ್ಲೂ ಹರಡದು. ಇತರ ಫಾರ್ಮ್‍ಗಳ ಹಂದಿಗಳಿಗೆ ಅಥವಾ ಕಾಡು ಹಂದಿಗಳಿಗೆ ಸೋಂಕು ತಗುಲದಂತೆ ಮುಂಜಾಗ್ರತೆಗಾಗಿ ಜನರನ್ನು ಸ್ಥಳಕ್ಕೆ ತೆರಳದಂತೆ ನಿಯಂತ್ರಣಹೇರಲಾಗುತ್ತಿದೆ ಜತೆಗೆ ಕಾರ್ಯಾಚರಣೆ ನಡೆಸುವ ಸಂದರ್ಭ ಪಿ.ಪಿ ಕಿಟ್ ಅಳವಡಿಸಲಾಗುತ್ತಿದೆ ಎಂದು ಜಿಲ್ಲಾ ಮೃಗಸಂರಕ್ಷಣಾ ಅಧಿಕಾರಿ ಡಾ. ಸುರೇಶ್"ವಿಜಯವಾಣಿ'ಗೆ ತಿಳಿಸಿದ್ದಾರೆ.
ಬಾಳೆಮೂಲೆಯ ಹಂದಿ ಫಾರ್ಮ್ ಪರವಾನಗಿಯಿಲ್ಲದೆ ಅನಧಿಕೃತವಾಗಿ ನಡೆಸಲಾಗುತ್ತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಪಂಚಾಯಿತಿ ಆಡಳಿತ ಸ್ಟಾಪ್ ಮೆಮೋ ನೀಡಿದ್ದರೂ, ಇದನ್ನು ಉಲ್ಲಂಘಿಸಿ ಚಟುವಟಿಕೆ ನಿರತವಾಗಿತ್ತು ಎನ್ನಲಾಗಿದೆ.
ಆಫ್ರಿಕನ್ ಹಂದಿಜ್ವರ-ಕ್ಷಿಪ್ರ ಕಾರ್ಯಪಡೆಯಿಂದ ಕಾಟುಕುಕ್ಕೆ ಬಾಳೆಮೂಲೆ ಫಾರ್ಮಿನ 500ಕ್ಕೂ ಹೆಚ್ಚು ಹಂದಿಗಳ ಹತ್ಯೆ
0
ಜನವರಿ 13, 2023
Tags