ಹರಿಯಾಣ: ಹರಿಯಾಣದ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರನ್ನು ಮತ್ತೊಮ್ಮೆ ಆರ್ಕೈವ್ಸ್ ಇಲಾಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. 30 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಇದು ಖೇಮ್ಕಾ ಅವರ 55 ನೇ ವರ್ಗಾವಣೆಯಾಗಿದೆ.
ಖೇಮ್ಕಾ ಅವರು ಆರ್ಕೈವ್ಸ್ ಇಲಾಖೆಯಲ್ಲಿ 1990 ರ ಬ್ಯಾಚ್ನ ಐಎಎಸ್ ಅಧಿಕಾರಿ ಡಾ ರಾಜ ಶೇಖರ್ ವುಂಡ್ರು ಅವರ ಸ್ಥಾನಕ್ಕೆ ಬರಲಿದ್ದಾರೆ. 1991 ರ ಬ್ಯಾಚ್ ಐಎಎಸ್ ಅಧಿಕಾರಿ, ಖೇಮ್ಕಾ ಅವರನ್ನು ಅಕ್ಟೋಬರ್ 2021 ರಲ್ಲಿ ಆರ್ಕೈವ್ಸ್, ಆರ್ಕಿಯಾಲಜಿ ಮತ್ತು ಮ್ಯೂಸಿಯಂಸ್ ಇಲಾಖೆಯಿಂದ ಕೊನೆಯದಾಗಿ ವರ್ಗಾಯಿಸಲಾಗಿತ್ತು. ಇವರನ್ನು ಆರ್ಕೈವ್ಸ್ ಇಲಾಖೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಅವರು ಫೆಬ್ರವರಿ 2022 ರಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಬಡ್ತಿ ಪಡೆದರು. ಅವರು ಅದೇ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯನ್ನು ನಿರ್ವಹಿಸುವುದನ್ನು ಮುಂದುವರೆಸಿದ್ದರು.
ಸೋಮವಾರ ಹೊರಡಿಸಿದ ವರ್ಗಾವಣೆ ಆದೇಶದ ಹಿಂದೆ ಹರಿಯಾಣ ಸರ್ಕಾರ ಯಾವುದೇ ಸ್ಪಷ್ಟ ಕಾರಣವನ್ನು ಉಲ್ಲೇಖಿಸಿಲ್ಲ. ಇತರ ನಾಲ್ವರು ಎಚ್‌ಸಿಎಸ್ ಅಧಿಕಾರಿಗಳನ್ನೂ ಇದೇ ಸಂದರ್ಭದಲ್ಲಿ ವರ್ಗಾವಣೆ ಮಾಡಲಾಗಿದೆ.