ನವದೆಹಲಿ: ಸುಮಾರು 20 ಲಕ್ಷ ಚಂದಾದಾರರಿಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಆರು ಯೂಟ್ಯೂಬ್ ಚಾನೆಲ್‌ಗಳ ಮೇಲೆ ಸರ್ಕಾರ ಗುರುವಾರ ಕಠಿಣ ಕ್ರಮ ಕೈಗೊಂಡಿದೆ.
ಆರು ಚಾನೆಲ್‌ಗಳು ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ, ಅವುಗಳು ಸುಳ್ಳು ಮಾಹಿತಿಯನ್ನು ಹರಡುತ್ತಿವೆ, ಅವುಗಳಲ್ಲಿನ ವಿಡಿಯೊಗಳು 51 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿವೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಾಧ್ಯಮ ಮಾಹಿತಿ ಬ್ಯೂರೋದ (PIB) 'ಫ್ಯಾಕ್ಟ್ ಚೆಕ್' ಘಟಕ ತಿಳಿಸಿದೆ.
ಈ ಯೂಟ್ಯೂಬ್ ಚಾನೆಲ್‌ಗಳು ಚುನಾವಣೆ, ಸುಪ್ರೀಂ ಕೋರ್ಟ್ ಮತ್ತು ಸಂಸತ್ತಿನಲ್ಲಿನ ಕಲಾಪಗಳು ಮತ್ತು ಸರ್ಕಾರದ ಕಾರ್ಯವೈಖರಿಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ಕಂಡುಬಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸರ್ಕಾರ ಪಟ್ಟಿ ಮಾಡಿರುವ ಯೂಟ್ಯೂಬ್ ಚಾನೆಲ್‌ಗಳು
-ನೇಷನ್ ಟಿವಿ - 5.57 ಲಕ್ಷಕ್ಕೂ ಹೆಚ್ಚು ಚಂದಾದಾರರು
-ಸಂವಾದ್ ಟಿವಿ - 10.9 ಲಕ್ಷ ಚಂದಾದಾರರು
-ಸರೋಕರ್ ಭಾರತ್ - 21,100 ಚಂದಾದಾರರು
-ನೇಷನ್ 24 - 25,400 ಚಂದಾದಾರರು
-ಸ್ವರ್ಣಿಮ್ ಭಾರತ್ - 6,070 ಚಂದಾದಾರರು
-ಸಂವಾದ್ ಸಮಾಚಾರ್- 3.48 ಲಕ್ಷ ಚಂದಾದಾರರು
ಪಿಐಬಿಯ ಫ್ಯಾಕ್ಟ್ ಚೆಕ್ ಘಟಕದ ಪರಿಶೀಲನೆ ನಂತರ, 'ಸಂವಾದ್ ಸಮಾಚಾರ್', 'ಸಂವಾದ್ ಟಿವಿ' ಮತ್ತು 'ನೇಷನ್ ಚಾನೆಲ್'ಗಳು ತಮ್ಮ ಹೆಸರುಗಳನ್ನು ಕ್ರಮವಾಗಿ 'ಇನ್‌ಸೈಡ್ ಇಂಡಿಯಾ', 'ಇನ್‌ಸೈಡ್ ಭಾರತ್' ಮತ್ತು 'ನೇಷನ್ ವೀಕ್ಲಿ' ಎಂದು ಬದಲಾಯಿಸಿಕೊಂಡಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಾನೆಲ್‌ಗಳಲ್ಲಿನ ವಿಡಿಯೊಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಮೇಲಿನ ನಿಷೇಧದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಲಾಗಿದೆ. ರಾಷ್ಟ್ರಪತಿ, ಭಾರತದ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಸಾಂವಿಧಾನಿಕ ಹುದ್ದೆಗಳಲ್ಲಿರುವ ಹಲವರಿಗೆ ಸಂಬಂಧಿಸಿದ ಸುಳ್ಳು ಹೇಳಿಕೆಗಳನ್ನು ಬಿತ್ತರಿಸಲಾಗಿದೆ.
ವೀಕ್ಷಕರನ್ನು ಸೆಳೆಯಲು ಮತ್ತು ಪ್ರಕಟಿತ ವಿಡಿಯೊಗಳಿಂದ ಹೆಚ್ಚು ಹಣಗಳಿಸಲು ಚಾನೆಲ್‌ಗಳು ನಕಲಿ ಸುದ್ದಿ, ಕ್ಲಿಕ್‌ಬೈಟ್ (ಕ್ಲಿಕ್ ಮಾಡಲೆಂದೇ ಹಾಕಲಾಗವ ಅತಿರಂಜನೀಯ ಶೀರ್ಷಿಕೆಗಳು) ಮತ್ತು ಅತ್ಯಾಕರ್ಷಕ ಥಂಬ್‌ನೇಲ್‌ಗಳು ಮತ್ತು ಟಿವಿ ಚಾನೆಲ್‌ಗಳ ಸುದ್ದಿ ನಿರೂಪಕರ ಚಿತ್ರಗಳನ್ನು ಬಳಸಿವೆ ಎಂದು ಪಿಐಬಿ ಹೇಳಿದೆ.
ಪಿಐಬಿಯ ಫ್ಯಾಕ್ಟ್‌ಚೆಕ್ ಘಟಕ ಎರಡನೇ ಬಾರಿಗೆ ಇಂಥ ಚಾನೆಲ್‌ಗಳನ್ನು ಪತ್ತೆ ಮಾಡಿದೆ.
ಕಳೆದ ತಿಂಗಳು, ನಕಲಿ ಸುದ್ದಿಗಳನ್ನು ಹರಡುತ್ತಿದ್ದ ಮೂರು ಚಾನೆಲ್‌ಗಳನ್ನು ಪಿಐಬಿ ಬಹಿರಂಗಪಡಿಸಿತ್ತು. ಅವುಗಳನ್ನು ನಿರ್ಬಂಧಿಸಲು ಯೂಟ್ಯೂಬ್‌ಗೆ ಸೂಚನೆ ನೀಡಿತ್ತು.