ಅಯೋಧ್ಯೆ: ನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರವು ಆರು ಮಹಾ ಪ್ರವೇಶ ದ್ವಾರಗಳನ್ನು ಹೊಂದಿದ್ದು, ಎಲ್ಲದಕ್ಕೂ ರಾಮಾಯಣದ ಪಾತ್ರಗಳ ಹೆಸರನ್ನು ಇಡಲಾಗಿದೆ.
ಲಖನೌ, ಗೋರಖ್‌ಪುರ, ರಾಯ್ ಬರೇಲಿ, ಗೊಂಡಾ, ಪ್ರಯಾಗ್‌ರಾಜ್ ಮತ್ತು ವಾರಣಾಸಿ ಕಡೆಯಿಂದ ಬರುವ ಭಕ್ತರು ಈ ಬೃಹತ್ ಪ್ರವೇಶ ದ್ವಾರಗಳ ಮೂಲಕವೇ ಅಯೋಧ್ಯೆಯನ್ನು ಪ್ರವೇಶಿಸಬೇಕು.
ಲಖನೌದಿಂದ ಬರುವವರು 'ಶ್ರೀರಾಮ ದ್ವಾರ' ಮೂಲಕ ದೇವಾಲಯದ ಪಟ್ಟಣವನ್ನು ಪ್ರವೇಶಿಸುತ್ತಾರೆ. ಗೋರಖಪುರದಿಂದ ಬರುವವರು 'ಹನುಮಾನ್ ದ್ವಾರ' ಮೂಲಕ ನಗರವನ್ನು ಪ್ರವೇಶಿಸುತ್ತಾರೆ. ಅಲಹಾಬಾದ್‌ನಿಂದ ಬರುವವರಿಗೆ 'ಭರತ ದ್ವಾರ', ಗೊಂಡಾ ರಸ್ತೆಯಲ್ಲಿ 'ಲಕ್ಷ್ಮಣ ದ್ವಾರ', ವಾರಣಾಸಿ ರಸ್ತೆಯಲ್ಲಿ 'ಜಟಾಯು ದ್ವಾರ' ಮತ್ತು ರಾಯ್ ಬರೇಲಿ ಕಡೆಯಿಂದ ಬರುವವರಿಗೆ 'ಗರುಡ ದ್ವಾರ'ಗಳು ಸ್ವಾಗತ ಕೋರಲಿವೆ.
ಪ್ರತಿ ಪ್ರವೇಶ ದ್ವಾರದಲ್ಲಿ, ಬೃಹತ್ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯಗಳು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಸೇರಿದಂತೆ ಭಕ್ತರಿಗೆ ವಿಶ್ವದರ್ಜೆಯ ಸೌಲಭ್ಯಗಳು ಇರುತ್ತವೆ ಎಂದು ಅಯೋಧ್ಯೆ ಜಿಲ್ಲಾಧಿಕಾರಿ ನಿತೀಶ್ ಕುಮಾರ್ ಹೇಳಿದ್ದಾರೆ.
'ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಯನ್ನು ಪೌರಾಣಿಕ ನಗರವಾಗಿ ಮರುಸ್ಥಾಪಿಸಲು ನಿರ್ಧರಿಸಿದ್ದಾರೆ. ಅವರು ಪವಿತ್ರ ನಗರವನ್ನು ವಿಶ್ವ ದರ್ಜೆಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಯೋಜಿಸಿದ್ದಾರೆ' ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. 2024ರಲ್ಲಿ ನೂತನ ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.